ಸಿಎಂ ಪದಗ್ರಹಣಕ್ಕೆ ಬಂದು ಕಾಲು ಉಳುಕಿಸಿಕೊಂಡ ಶಿವಣ್ಣ – ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ!
ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸಿಎಂ, ಡಿಸಿಎಂ ಜೊತೆ 8 ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಹಲವು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಹಾಗೇ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ನಟ, ನಟಿಯರು ಕೂಡ ಸಾಕ್ಷಿಯಾಗಿದ್ರು. ಪದಗ್ರಹಣ ಕಾರ್ಯಕ್ರಮಕ್ಕೆ ನಟ ಶಿವಕುಮಾರ್ ಕೂಡ ಆಗಮಿಸಿದ್ರು. ಆದ್ರೆ ಕಾರ್ಯಕ್ರಮದಲ್ಲಿ ಶಿವಣ್ಣ ಕಾಲು ಉಳುಕಿಸಿಕೊಂಡಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ತಾರೆಯರು ಪಾಲ್ಗೊಂಡು, ತಾರಾ ಮೆರಗು ನೀಡಿದರು. ನಟ ಶಿವರಾಜ್ ಕುಮಾರ್, ತಮಿಳಿನ ಖ್ಯಾತ ನಟ ಕಮಲ್ ಹಾಸನ್, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ನಟಿ ನಿಶ್ವಿಕಾ ನಾಯ್ಡು, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟರಾದ ಸಾಧು ಕೋಕಿಲಾ, ದುನಿಯಾ ವಿಜಯ್, ಹಿರಿಯ ನಟಿ ಉಮಾಶ್ರೀ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಆದರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಶಿವರಾಜ್ ಕುಮಾರ್ ಕಾಲು ಉಳುಕಿಸಿಕೊಂಡು ಘಟನೆ ನಡೆದಿದೆ. ಕಾರ್ಯಕ್ರಮ ಮುಗಿದ ನಂತರ ಮೆಟ್ಟಿಲು ಇಳಿಯುವಾಗ ಈ ಘಟನೆ ನಡೆದಿದ್ದು, ಕಾಲು ಜಾರಿದ ಪರಿಣಾಮ ಹಾಗಾಗಿದೆ. ನಂತರ ಪತ್ನಿ ಗೀತಾ ಅವರ ಸಹಾಯದಿಂದ ತೆರಳಿದ್ದಾರೆ.
ಇದನ್ನೂ ಓದಿ : ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಜೊತೆ 8 ಸಚಿವರ ಪ್ರಮಾಣವಚನ – ಯಾವ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ?
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಿವರಾಜ್ ಕುಮಾರ್, ದುನಿಯಾ ವಿಜಯ್, ಸಾಧುಕೋಕಿಲಾ, ನಿಶ್ವಿಕಾ ನಾಯ್ಡು, ರಮ್ಯಾ ಸೇರಿದಂತೆ ಹಲವರು ಪ್ರಚಾರದಲ್ಲೂ ಪಾಲ್ಗೊಂಡಿದ್ದರು. ಕೆಲವರು ಸಿದ್ದರಾಮಯ್ಯನವರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದರೆ, ಇನ್ನೂ ಹಲವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು.
ಮತ್ತೊಂದೆಡೆ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ ಪ್ರಸಂಗ ನಡೆದಿದೆ. ಸರಗಳ್ಳರು ತಮ್ಮ ಕೈ ಚಳಕ ತೋರಿದ್ದು, ಸರ ಕಿತ್ತು ಓಡ್ತಿದ್ದವರನ್ನು ಬೆನ್ನಟ್ಟಿ ಪೊಲೀಸರು ಹಿಡಿದಿದ್ದಾರೆ. ಸಾರ್ವಜನಿಕರ ಸಹಾಯದೊಂದಿಗೆ ಇಬ್ಬರು ಕಳ್ಳರನ್ನ ಪೊಲೀಸರು ಸೆರೆಹಿಡಿದಿದ್ದಾರೆ. ಪ್ರಮಾಣವಚನ ಕಾರ್ಯಕ್ರಮ ಮುಗಿದು ಜನ ಹೊರಬರುತ್ತಿದ್ದಂತೆಯೇ ಕಳ್ಳತನ (Theft) ನಡೆದಿದೆ. ಸದ್ಯ ಇಬ್ಬರೂ ಕಳ್ಳರನ್ನು ಸಂಪಂಗಿ ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.