ಸೋಲು ಗೆಲುವಿನ ಮೆಟ್ಟಿಲಲ್ಲಿ ಸಿಎಂ ಗದ್ದುಗೆ – ಭಾಗ್ಯಗಳ ಸರದಾರ ಸಿದ್ದರಾಮಯ್ಯ ಹಾದಿಯೇ ರೋಚಕ!

ಸೋಲು ಗೆಲುವಿನ ಮೆಟ್ಟಿಲಲ್ಲಿ ಸಿಎಂ ಗದ್ದುಗೆ – ಭಾಗ್ಯಗಳ ಸರದಾರ ಸಿದ್ದರಾಮಯ್ಯ ಹಾದಿಯೇ ರೋಚಕ!

ಬಡವರ ನಾಯಕ. ಭಾಗ್ಯಗಳ ಸರದಾರ. ರಾಜ್ಯದುದ್ದಗಲಕ್ಕೂ ಅಭಿಮಾನಿ ಬಳಗ ಹೊಂದಿರುವ ಮಾಸ್ ಮಹಾರಾಜ. ಸಾರ್ವಜನಿಕ ಸ್ಥಳವೇ ಇರಲಿ ಸದನವೇ ಆಗಲಿ. ಏಟಿಗೆ ಎದುರೇಟು, ಸವಾಲಿಗೆ ಪ್ರತಿಸವಾಲು ಹಾಕುವ ಚತುರ. ಸೋಲು ಗೆಲುವಿನ ಹಾದಿಯಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವ ಛಲದಂಕಮಲ್ಲ ಈ ಸಿದ್ದರಾಮಯ್ಯ. ಕರ್ನಾಟಕದ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಪಟ್ಟಕ್ಕೇರಿರುವ ಸಿದ್ದರಾಮಯ್ಯ ಅನ್ನೋ ಈ ಶೂರನ ರಾಜಕೀಯ ಹಾದಿಯೇ ರೋಚಕವಾಗಿದೆ.

ಅಸಲಿಗೆ ಸಿದ್ದರಾಮಯ್ಯ ಕೃಷಿ ಕುಟುಂಬದಿಂದ ಬಂದವರು. ಓದಿನಲ್ಲಿ ಸದಾ ಮುಂದಿರುತ್ತಿದ್ದ ಸಿದ್ದರಾಮಯ್ಯ ಡಾಕ್ಟರ್ ಆಗಬೇಕೆಂಬುದು ಪೋಷಕರ ಕನಸಾಗಿತ್ತು. ಆದರೆ ಪೋಷಕರ ವಿರೋಧದ ನಡುವೆಯೂ ಸಿದ್ದು ಲಾ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದರು. ಹಸಿವು ಮುಕ್ತ ರಾಜ್ಯ ಮಾಡುವುದು ಸಿದ್ದರಾಮಯ್ಯನವರ ಪ್ರಮುಖ ಗುರಿಗಳಲ್ಲೊಂದು. ಈ ನಿಟ್ಟಿನಲ್ಲಿ ಬಡವರಿಗಾಗಿ ಕಡಿಮೆ ದರದಲ್ಲಿ ತಿಂಡಿ ನೀಡುವ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿದರು. ಹಾಗೂ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದರು. 2018ರಲ್ಲಿ ಮುಖ್ಯಮಂತ್ರಿಯಾಗಿ ಇವರು ತಮ್ಮ 13ನೇ ಬಜೆಟ್ ಮಂಡಿಸಿದ್ದು ದಾಖಲೆಯಾಗಿದೆ. ಬಳ್ಳಾರಿಯ ಗಣಿಧಣಿ ಜನಾರ್ದನ ರೆಡ್ಡಿ ವಿರುದ್ಧ ಸಮರ ಸಾರಿದ್ದ ಸಿದ್ದರಾಮಯ್ಯ 2010 ರಲ್ಲಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ 320 ಕಿ. ಮೀ. ಪಾದಯಾತ್ರೆ ಮಾಡಿದ್ದರು. ಇದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮೈಲುಗಲ್ಲಾಗಿದೆ.

ಇದನ್ನೂ ಓದಿ : ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಜೊತೆ 8 ಸಚಿವರ ಪ್ರಮಾಣವಚನ – ಯಾವ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ?

ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದುದ್ದಕ್ಕೂ ಹೋರಾಟದ ಮನೋಭಾವ ರೂಢಿಸಿಕೊಂಡು ಬಂದವರು ಮತ್ತು ಅದರಲ್ಲಿ ಸೋಲು-ಗೆಲುವು ಎರಡನ್ನೂ ಕಂಡವರು. ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿಯುಳ್ಳ ಸಿದ್ದರಾಮಯ್ಯ ಅಹಿಂದ ನಾಯಕ ಎಂದೇ ಕರೆಸಿಕೊಳ್ಳುತ್ತಾರೆ.

2013 ರಿಂದ 2018ರ ತನಕ ಭರ್ತಿ 5 ವರ್ಷ ಕರ್ನಾಟಕ ರಾಜ್ಯವನ್ನ ಆಳಿದ್ದ ಸಿದ್ದರಾಮಯ್ಯ ಭಾಗ್ಯಗಳ ವಿದಾತ ಅಂತಾನೇ ಕರೆಸಿಕೊಂಡಿದ್ದಾರೆ. 2018ರಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಆದರೆ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಸಿದ್ದರಾಮಯ್ಯ 2019ರಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. ವಿರೋಧ ಪಕ್ಷದ ನಾಯಕರಾಗಿ ಸದನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದಲ್ಲಿ ಸಿದ್ದರಾಮಯ್ಯಗೆ ಸಿದ್ದರಾಮಯ್ಯರೇ ಸರಿಸಾಟಿ. ಡಿ. ದೇವರಾಜ ಅರಸು ನಂತರ ಮುಖ್ಯಮಂತ್ರಿಯಾಗಿ 5 ವರ್ಷ ಅವಧಿ ಪೂರ್ಣಗೊಳಿಸಿದ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಸಿದ್ದರಾಮಯ್ಯನವರದ್ದಾಗಿದೆ. ಮುಖ್ಯಮಂತ್ರಿಯಾದ ನಂತರ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು.

ರಾಜಕೀಯದ ಆರಂಭದಲ್ಲಿ ಜೆಡಿಎಸ್‌ನಲ್ಲಿದ್ದಾಗ 2 ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದರು. 1996ರಲ್ಲಿ ಹೆಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿ ಆಯ್ಕೆಯಾದಾಗ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಪ್ರಬಲ ಸ್ಪರ್ಧಿಯಾಗಿದ್ದರು. ಅಂದು ದೇವೇಗೌಡರ ಆಯ್ಕೆಯೂ ಸಿದ್ದರಾಮಯ್ಯ ಅವರೇ ಆಗಿದ್ದರು. ಆದರೆ ರಾಮಕೃಷ್ಣ ಹೆಗಡೆ ಅವರ ಬೆಂಬಲ ಹಾಗೂ ಹಿರಿತನದ ಆಧಾರದ ಮೇಲೆ ಆಗ ಜೆ.ಹೆಚ್. ಪಟೇಲರಿಗೆ ಮುಖ್ಯಮಂತ್ರಿ ಗಾದಿ ಒಲಿದು, ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನಂತರ 2004ರಲ್ಲಿ ಕಾಂಗ್ರೆಸ್-ಜಾ.ದಳ ಮೈತ್ರಿ ಸರ್ಕಾರ ರಚನೆ ಕಾಲಕ್ಕೂ ಸಿದ್ದರಾಮಯ್ಯ ಹೆಸರು ಮುಂಚೂಣಿಯಲ್ಲಿತ್ತು. ಆದರೆ ದೇವೇಗೌಡರೇ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ಗೆ ಒಪ್ಪಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮತ್ತೆ ಉಪಮುಖ್ಯಮಂತ್ರಿ ಹುದ್ದೆಗೆ ಸೀಮಿತಗೊಳಿಸಿದರು. ಆ ವೇಳೆಗಾಗಲೇ ಸಿದ್ದರಾಮಯ್ಯ ರಾಜಕೀಯವಾಗಿ ಪ್ರಬಲರಾಗಿದ್ದುದು, ತಮಗೇ ಮುಳುವಾಗಬಹುದೆಂಬ ಆತಂಕದಿಂದ ದೇವೇಗೌಡರು ಇವರನ್ನು ಮುಖ್ಯಮಂತ್ರಿ ಗಾದಿಯಿಂದ ದೂರವಿಡಲು ಕಾರಣವಾಗಿದ್ದು ರಹಸ್ಯವೇನಲ್ಲ. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು.

ತಮಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದರೆಂಬ ಕಾರಣಕ್ಕೆ ದೇವೇಗೌಡರ ವಿರುದ್ಧ ಮುನಿಸಿಕೊಂಡ ಸಿದ್ದರಾಮಯ್ಯ ನಂತರ ಉಪಮುಖ್ಯಮಂತ್ರಿ ಹುದ್ದೆಗೂ ಸಂಚಕಾರ ಬಂದಾಗ ಸಿಡಿದೆದ್ದು, ತಮ್ಮ ರಾಜಕೀಯ ಅಸ್ತಿತ್ವ ಸಾಬೀತುಪಡಿಸಲು ಅಹಿಂದ ಸಂಘಟನೆಯತ್ತ ಮುಖ ಮಾಡಿದರು. ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿ, ಉಪಚುನಾವಣೆಯ ಹಣಾಹಣಿಯಲ್ಲಿ ಮತ್ತೆ ಗೆದ್ದು ತೊಡೆ ತಟ್ಟಿದರು. 2013ರಲ್ಲಿ ಯಾರ ಹಂಗಿಲ್ಲದೆ ಕಾಂಗ್ರೆಸ್ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವಷ್ಟು ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿತ್ತು. ಆ ವೇಳೆ ಸಿದ್ದರಾಮಯ್ಯ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾದರು.

suddiyaana