ಪುತ್ತೂರಿನಲ್ಲಿ ಪೊಲೀಸರ ಅಮಾನುಷ ವರ್ತನೆ – ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವೆಂದ ಅಲೋಕ್ ಕುಮಾರ್!

ಪುತ್ತೂರಿನಲ್ಲಿ ಪೊಲೀಸರ ಅಮಾನುಷ ವರ್ತನೆ – ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವೆಂದ ಅಲೋಕ್ ಕುಮಾರ್!

ಬಿಜೆಪಿ ಭದ್ರಕೋಟೆ ಎನಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಸೋಲು ಅನುಭವಿಸಿದೆ. ಟಿಕೆಟ್ ಫೈಟ್ ನಡುವೆ ಕಾಂಗ್ರೆಸ್ ನ ಅಶೋಕ್ ರೈ ಗೆದ್ದು ಬೀಗಿದ್ದಾರೆ. ಆದರೆ ಬಿಜೆಪಿ ಸೋಲಿನ ಬಳಿಕ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇದರ ನಡುವೆ ಶ್ರದ್ಧಾಂಜಲಿ ಬ್ಯಾನರ್ ವೊಂದು ಬಾರೀ ಸುದ್ದಿ ಮಾಡ್ತಿದೆ. ಇದೇ ವಿಚಾರವಾಗಿ ಆರೋಪಿಗಳ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿರೋ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ : ಕಾಂಗ್ರೆಸ್‌ ಘೋಷಿಸಿದ್ದ ಐದು ಗ್ಯಾರಂಟಿಗಳು ಜಾರಿಗೆ ಬರುತ್ತಾ? – ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಅಮಾನುಷವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಗುರುವಾರ ಭರವಸೆ ನೀಡಿದ್ದಾರೆ. ಘಟನೆ ಸಂಬಂಧ ಟ್ವೀಟ್ ಮಾಡಿರುವ ಅವರು, ಪುತ್ತೂರು ಘಟನೆ ಸಂಬಂಧ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಮತ್ತು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಂತಹ ಕಾನೂನುಬಾಹಿರ ಮತ್ತು ಅನಗತ್ಯ ಕ್ರಮಗಳನ್ನು ಸಹಿಸುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಆಗಿದ್ದೇನಂದ್ರೆ ಮೇ 13ರಂದು ಹೊರಬಿದ್ದ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ಪುತ್ತೂರು ಬಸ್​ ನಿಲ್ದಾಣದ ಬಳಿ ರಾತ್ರೋರಾತ್ರಿ ನಳಿನ್ ಕುಮಾರ್ ಕಟೀಲ್ ಹಾಗೂ ಸಂಸದ ಡಿವಿ ಸದಾನಂದ ಗೌಡ ಅವರ ಭಾವಚಿತ್ರ ಇರುವ ಶ್ರದ್ಧಾಂಜಲಿ ಬ್ಯಾನರ್ ಹಾಕಲಾಗಿತ್ತು. ಆ ಬ್ಯಾನರ್​ಗೆ ಚಪ್ಪಲಿ ಹಾರ ಹಾಕಲಾಗಿತ್ತು. ಈ ಬಗ್ಗೆ ಪುತ್ತೂರು ನಗರಸಭಾ ಆಯುಕ್ತ ಮಧು ಮನೋಹರ್ ಹಾಗೂ ಇತರರು ಪೊಲೀಸರಿಗೆ ದೂರು ನೀಡಿದ್ದರು. ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಘಟನೆಗೆ ಸಂಬಂಧಿಸಿದಂತೆ 9 ಜನರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಪುತ್ತೂರು ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಗಳಿಗೆ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಲಾಗಿದೆ ಎಂದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಗಳು ಕೇಳಿ ಬಂದಿದ್ದವು. ನಂತರ ಹಿಂದೂ ಸಂಘಟನೆ ಮುಖಂಡ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಆರೋಪಿಗಳನ್ನು ಬಿಡಿಸಿಕೊಂಡು ಬಂದಿದ್ದರು.

 

suddiyaana