ಸಿದ್ದರಾಮಯ್ಯ ಡಿಕೆಶಿ ನಡುವೆ ತಾರಕಕ್ಕೇರಿದ ಸಿಎಂ ಕಾಳಗ – ಕ್ಲೈಮ್ಯಾಕ್ಸ್ ನಲ್ಲಿ ಏನಿದು ಟ್ವಿಸ್ಟ್..!? –
ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದ್ರೂ ಕೂಡ ಸಿಎಂ ಆಯ್ಕೆ ಕಗ್ಗಂಟು ಮಾತ್ರ ಕರಗುತ್ತಲೇ ಇಲ್ಲ. ವಿವಾದ ಹೈಕಮಾಂಡ್ ಅಂಗಳ ತಲುಪಿ ಮೂರು ದಿನ ಕಳೆದ್ರೂ ನಾಯಕರು ಅಂತಿಮ ನಿರ್ಧಾರ ಕೈಗೊಳ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಟ್ಟು ಬಿಡದೆ ಕುಳಿತಿದ್ದಾರೆ. ಇದೇ ಕಾರಣಕ್ಕೆ ಸಿಎಂ ಆಯ್ಕೆ ವಿಚಾರಕ್ಕೂ ಕ್ಷಣ ಕ್ಷಣಕ್ಕೂ ಜಟಿಲವಾಗುತ್ತಿದೆ.
ಮಧ್ಯಾಹ್ನದ ವೇಳೆಗೆ ಸಿದ್ದರಾಮಯ್ಯ ಸಿಎಂ ಆಗಬಹುದು ಎಂಬ ಸುದ್ದಿ ಹೊರಬಿದ್ದಿತ್ತು. ಕಾಂಗ್ರೆಸ್ ನಾಯಕರು ಕೂಡ ಬಹಿರಂಗವಾಗಿಯೇ ಹೇಳಿಕೆಗಳನ್ನ ಕೊಟ್ಟಿದ್ರು. ಇದರಿಂದ ಸಿಟ್ಟಾದ ಡಿ.ಕೆ ಶಿವಕುಮಾರ್ ಹೈಕಮಾಂಡ್ ಬಳಿ ಅಸಮಾಧಾನ ಹೊರ ಹಾಕಿದ್ರು. ಸಿಎಂ ಆಯ್ಕೆಯೇ ಅಂತಿಮವಾಗದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಲಾಗುತ್ತಿದೆ ಎಂದು ಸಿಟ್ಟು ತೋಡಿಕೊಂಡಿದ್ರು. ಇದಾದ ಬಳಿಕ ಮಾಧ್ಯಮಗಳ ಮುಂದೆ ಹಾಜರಾದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ (Randeep Surjewala) ಇನ್ನೂ ಸಿಎಂ ಆಯ್ಕೆ ಫೈನಲ್ ಆಗಿಲ್ಲ ಎಂದು ಘೋಷಣೆ ಮಾಡಿದ್ರು.
ಇದನ್ನೂ ಓದಿ : ಡಿಕೆಶಿಗೆ ಕೈ ತಪ್ಪಿತಾ ಸಿಎಂ ಸ್ಥಾನ..? – ಗಲಾಟೆ ಸಾಧ್ಯತೆ ಹಿನ್ನೆಲೆ ರಾಮನಗರದಲ್ಲಿ ಹೈ ಅಲರ್ಟ್!
ಹೈಕಮಾಂಡ್ ಜತೆ ಹಲವು ಸುತ್ತಿನ ಸಭೆಗಳ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದ ಬಳಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸುರ್ಜೇವಾಲ, ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇಬ್ಬರೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ಮುಖ್ಯಮಂತ್ರಿ ಆಯ್ಕೆ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ವದಂತಿಗಳು ಹರಡಿದ್ದು, ರಾಜ್ಯದ ಹಲವೆಡೆ ಸಿದ್ದರಾಮಯ್ಯ ಬೆಂಬಲಿಗರು ಸಂಭ್ರಮವನ್ನೂ ವ್ಯಕ್ತಪಡಿಸಿದ್ದರು. ಹಲವೆಡೆ ಸಂಭ್ರಮಾಚರಣೆ ಆರಂಭವಾಗಿತ್ತು. ಇದರ ಬೆನ್ನಲ್ಲೇ ಸುರ್ಜೇವಾಲ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, 135 ಸ್ಥಾನ ಗಳಿಸುವ ಮೂಲಕ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿತ್ತು.