ʼನಾವು ವಿದ್ಯುತ್ ಬಿಲ್ ಕಟ್ಟಲ್ಲ, ಕಾಂಗ್ರೆಸ್ ಬಳಿಯೇ ಕೇಳಿʼ – ಕೆಇಬಿ ಕಲೆಕ್ಟರ್ ಊರಿಂದ ಹೊರಕ್ಕೆ!
ಕೊಪ್ಪಳ: ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಮಾಡಿದ್ದ ಘೋಷಣೆಯನ್ನು ಜನರೇ ಈಗ ಜಾರಿಗೆ ತಂದಂತಿದೆ. ʼಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ಕರೆಂಟ್ ಬಿಲ್ ಕಟ್ಟೋದಿಲ್ಲʼ ಎಂದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪುರ ಗ್ರಾಮದ ಜನರು ಪಟ್ಟು ಹಿಡಿದಿದ್ದಾರೆ.
ಜಮಾಪುರ ಗ್ರಾಮದಲ್ಲಿ ಜನರು ವಿದ್ಯುತ್ ಬಿಲ್ ಪಾವತಿ ಮಾಡಿಸಿಕೊಳ್ಳಲು ಬಂದ ಕೆಇಬಿ ಬಿಲ್ ಕಲೆಕ್ಟರ್ನನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. “ಕಾಂಗ್ರೆಸ್ ಸರ್ಕಾರ ಬಂದಿದೆ ಅವರ ಬಳಿಯೆ ಬಿಲ್ ತಗೆದುಕೋ ನಾವು ಬಿಲ್ ಕಟ್ಟಲ್ಲ. ಬೇಕಾದರೆ ನಿನ್ನ ಆಫೀಸರ್ ಬಳಿ ಹೋಗಿ ಹೇಳು” ಎಂದು ಜನರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ಜಾರಿಗೂ ಮೊದಲೇ ಕರೆಂಟ್ ಬಿಲ್ ನಿರಾಕರಣೆ!
“ಗ್ರಾಮದಲ್ಲಿ ಯಾರ ಮನೆಗೂ ಹೋಗಿ ಬಿಲ್ ಕೇಳಬೇಡ. ಕಮರ್ಷಿಯಲ್ ಮೀಟರ್ ಗೆ ಮಾತ್ರ ಬಿಲ್ ಕೇಳು ಮನೆಗಳ ತಂಟೆಗೆ ಬರಬೇಡ” ಎಂದು ಬಿಲ್ ಕಲೆಕ್ಟರ್ಗೆ ಜನರು ಕ್ಲಾಸ್ ತೆಗೆದುಕೊಂಡಿದ್ದಲ್ಲದೇ, ಬಿಲ್ ಕಲೆಕ್ಟರ್ರನ್ನು ಗ್ರಾಮದಿಂದ ಹೊರ ಕಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆಯಲ್ಲಿ ಕೂಡ ಇಂತಹದ್ದೇ ಘಟನೆ ನಡೆದಿತ್ತು. ವಿದ್ಯುತ್ ಬಿಲ್ ನೀಡಲು ಬೆಸ್ಕಾಂ ಮೀಟರ್ ರೀಡರ್ ಗ್ರಾಮಕ್ಕೆ ಧಾವಿಸಿದ್ದರು. ಈ ವೇಳೆ ಗ್ರಾಮದ ಜನರು, ʼಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬಿಲ್ ಕಟ್ಟುವಂತಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನಾವು ಕರೆಂಟ್ ಬಿಲ್ ಕಟ್ಟುವುದಿಲ್ಲ. ಹೀಗಾಗಿ ಮೀಟರ್ ರೀಡಿಂಗ್ ಬರೆಯಬೇಡʼ ಎಂದು ಅವಾಜ್ ಹಾಕಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಉಚಿತ ವಿದ್ಯುತ್ ಯೋಜನೆಯನ್ನು ಇನ್ನಷ್ಟೇ ಜಾರಿಗೊಳಿಸಬೇಕಿದೆ. ಆದರೆ ಜನ ಹೀಗೆ ತಾವಾಗೇ ವಿದ್ಯುತ್ ಬಿಲ್ ಕಟ್ಟಲು ನಿರಾಕರಿಸುತ್ತಿರುವುದು ಬೆಸ್ಕಾಂ ಅಧಿಕಾರಿಗಳಿಗೆ ಇರಿಸುಮುರಿಸು ಉಂಟುಮಾಡಿದೆ.