ಕೆಆರ್ ಪುರಂ – ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದಲ್ಲಿ ಅಂತಿಮ ಕಾಮಗಾರಿ – ಸಂಚಾರಕ್ಕೆ ಮುಕ್ತ ಯಾವಾಗ?

ಕೆಆರ್ ಪುರಂ – ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದಲ್ಲಿ ಅಂತಿಮ ಕಾಮಗಾರಿ – ಸಂಚಾರಕ್ಕೆ ಮುಕ್ತ ಯಾವಾಗ?

ಬೆಂಗಳೂರು ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ ಟ್ರಾಫಿಕ್ ಸಮಸ್ಯೆ ಕೂಡ ಅಷ್ಟೇ ವೇಗವಾಗಿ ಹೆಚ್ಚುತ್ತಿದೆ. ಟ್ರಾಫಿಕ್ ಜಾಮ್ ನಿಂದಾಗಿ ವಿಶ್ವಮಟ್ಟದಲ್ಲಿ ಸಿಲಿಕಾನ್ ಸಿಟಿ ಕುಖ್ಯಾತಿ ಪಡೆದಿದೆ. ನಮ್ಮ ಮೆಟ್ರೋ ಸಂಚಾರ ಶುರುವಾದ ಮೇಲೆ ವಾಹನ ದಟ್ಟಣೆಗೆ ಸ್ವಲ್ಪ ಬ್ರೇಕ್ ಬಿದ್ದಿದೆ. ಇದೀಗ ನಮ್ಮ ಮೆಟ್ರೋ ಮತ್ತಷ್ಟು ವಿಸ್ತರಣೆಯಾಗುತ್ತಿದ್ದು ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದಂತಾಗಿದೆ.

ನಮ್ಮ ಮೆಟ್ರೋದ (Namma Metro) ಬಹುನಿರೀಕ್ಷಿತ ಬೈಯಪ್ಪನಹಳ್ಳಿ-ಕೆಆರ್ ಪುರಂ ಮೆಟ್ರೋ ವಿಭಾಗದ 2 ಕಿಲೋಮೀಟರ್ ಮಾರ್ಗ ಜುಲೈ 15 ರೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ. ಬೆನ್ನಿಗಾನಹಳ್ಳಿ ಬಳಿ ಬೆಂಗಳೂರು-ಸೇಲಂ ರೈಲ್ವೆ ಮಾರ್ಗದ ಮೇಲ್ಭಾಗದಲ್ಲಿ ತೆರೆದ ವೆಬ್ ಗರ್ಡರ್ ಅಳವಡಿಕೆ ಕೆಲಸ ಪೂರ್ಣಗೊಳ್ಳದ ಕಾರಣ ಸದ್ಯ ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗ ಸಂಚಾರಕ್ಕೆ ಮುಕ್ತವಾಗಿಲ್ಲ. ಇದೀಗ ಕಾಮಗಾರಿ ತ್ವರಿತವಾಗಿ ಸಾಗುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಜುಲೈ 15ರ ಒಳಗಾಗಿ ಮಾರ್ಗವು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ಇದನ್ನೂ ಓದಿ : ಶೆಟ್ಟರ್ ಭೇಟಿಯಾಗಿ ಪರಮೇಶ್ವರ್, ದಿನೇಶ್ ಧನ್ಯವಾದ ಸಲ್ಲಿಕೆ – ಪಕ್ಷ & ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನದ ಭರವಸೆ!

ಸದ್ಯ ಬೈಯಪ್ಪನಹಳ್ಳಿ ಮತ್ತು ಜ್ಯೋತಿಪುರ (ಬೆನ್ನಿಗಾನಹಳ್ಳಿ) ಎರಡೂ ಕಡೆಯಿಂದ ಟ್ರ್ಯಾಕ್ ಅಳವಡಿಕೆ ಪ್ರಗತಿಯಲ್ಲಿದೆ ಮತ್ತು ಈ ತಿಂಗಳ ಅಂತ್ಯದ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಬಿಎಂಆರ್​ಸಿಎಲ್ ವ್ಯವಸ್ಥಾಪಕ ನಿರ್ದೇಶಕ (MD) ಅಂಜುಮ್ ಪರ್ವೇಜ್ ತಿಳಿಸಿದ್ದಾರೆ. ಟ್ರಾಕ್ಷನ್, ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕೆಲಸಗಳನ್ನು ಜೂನ್ 15 ರೊಳಗೆ ಪೂರ್ಣಗೊಳಿಸಲಾಗುವುದು. ಬಳಿಕ ಪ್ರಾಯೋಗಿಕ ಸಂಚಾರ ಆರಂಭಗೊಳ್ಳದೆ. ದೂರವು ಕಡಿಮೆ ಇರುವುದರಿಂದ ಪ್ರಾಯೋಗಿಕ ಸಂಚಾರ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು. ಕೊನೆಯಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರನ್ನು ಪರಿಶೀಲನೆಗೆ ಆಹ್ವಾನಿಸಲಾಗುತ್ತದೆ. ಕೆಆರ್ ಪುರ-ಬೈಯಪ್ಪನಹಳ್ಳಿ ವಿಭಾಗದ ವಾಣಿಜ್ಯ ಕಾರ್ಯಾಚರಣೆಯನ್ನು ಜುಲೈ 15ರೊಳಗೆ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

 

suddiyaana