ಮೇ ಕೊನೇ ವಾರದಲ್ಲಿ ನೂತನ ಸಂಸತ್ತು ಭವನ ಉದ್ಘಾಟನೆ – ಎಷ್ಟು ಕೋಟಿ ವೆಚ್ಚ.. ಏನೆಲ್ಲಾ ವಿಶೇಷತೆ..?
ದೆಹಲಿ ರಾಷ್ಟ್ರ ರಾಜಧಾನಿ. ದೆಹಲಿಗೆ ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡುವ ತಾಣಗಳಲ್ಲಿ ಸಂಸತ್ತು ಕೂಡ ಒಂದು. ಗಣರಾಜ್ಯೋತ್ಸವದ ವೇಳೆ ಇದನ್ನು ನೋಡುವುದೇ ಒಂದು ಸೊಗಸು. ಇದೀಗ ದೇಶದ ನೂತನ ಸಂಸತ್ ಭವನ ಇದೇ ಸ್ಥಳದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸದ್ಯ ನೂತನ ಸಂಸತ್ ಭವನಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಸಿದ್ಧಗೊಳ್ಳುವ ಸಾಧ್ಯತೆ ಇದೆ. ಇದೇ ತಿಂಗಳ 28ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡುವ ಸಾಧ್ಯತೆ ಇದೆ.
ಸೆಂಟ್ರಲ್ ವಿಸ್ತಾ ಯೋಜನೆ ಭಾಗವಾಗಿ ಹೊಸ ಸಂಸತ್ ಭವನವನ್ನು ನಿರ್ಮಿಸಲಾಗುತ್ತಿದೆ. ತ್ರಿಕೋನಾಕಾರದ ಸಂಸತ್ ಭವನ ಇದಾಗಿದ್ದು, ಕಟ್ಟಡ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು ಕಟ್ಟಡದ ಒಳಾಂಗಣ ವಿನ್ಯಾಸದ ಕೆಲಸಗಳು ನಡೆಯುತ್ತಿವೆ. ಸುಮಾರು 1,200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ 1,224 ಸಂಸದರು ಕುಳಿತುಕೊಳ್ಳಲು ಅವಕಾಶವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 2020 ರಲ್ಲಿ ಈ ಹೊಸ ಸಂಸತ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸರ್ಕಾರ ಕಳೆದ ವರ್ಷದ ನವೆಂಬರ್ ಒಳಗಡೆ ಕಾಮಗಾರಿ ಮುಕ್ತಾಯಗೊಳಿಸುವ ಗುರಿಯನ್ನು ನಿಗದಿ ಪಡಿಸಿತ್ತು. ಆದರೆ ಕೊವಿಡ್ ಮತ್ತು ಇತರೆ ಕೆಲ ಸಮಸ್ಯೆಗಳಿಂದಾಗಿ ಡೆಡ್ಲೈನ್ ವಿಸ್ತರಣೆಯಾಗಿ ಈಗ ಉದ್ಘಾಟನೆಯ ಹಂತಕ್ಕೆ ಬಂದಿದೆ.
ಇದನ್ನೂ ಓದಿ : ಆಡಳಿತ ಪಕ್ಷವಾಗಿದ್ರೂ ಜನಮನ ಗೆಲ್ಲುವಲ್ಲಿ ಫೇಲ್ – ಹೀನಾಯ ಸೋಲಿಗೆ ಕಾರಣ ಹುಡುಕಿದ ಬಿಜೆಪಿ ನಾಯಕರು!
ನೂತನ ಸಂಸತ್ತು ಕಟ್ಟಡವು ಹಲವು ವಿಶೇಷತೆಗಳಿಂದ ಕೂಡಿದೆ. 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಹೊಸ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ 1,224 ಸಂಸದರು ಇರಬಹುದಾಗಿದೆ. ಹೊಸ ಸಂಸತ್ತಿನ ಕಟ್ಟಡವು ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ, ಇವುಗಳಿಗೆ ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಸಲಾಗಿದೆ.
ಈ ಕಟ್ಟಡವು ಸಂಸದರು, ವಿಐಪಿಗಳು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶದ್ವಾರಗಳನ್ನು ಹೊಂದಿರುತ್ತದೆ. ಈ ಕಟ್ಟಡದ ಮತ್ತೊಂದು ವಿಶೇಷವೆಂದರೆ ಸಂವಿಧಾನ ಭವನ, ದೇಶದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ನಿರ್ಮಿಸಲಾಗಿದೆ. ಭಾರತದ ಮೂಲ ಸಂವಿಧಾನದ ಪ್ರತಿಯನ್ನು ಸಭಾಂಗಣದಲ್ಲಿ ಇಡಲಾಗಿದೆ. ಇದು ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು ಮತ್ತು ಊಟದ ಕೋಣೆಗಳನ್ನು ಸಹ ಹೊಂದಿದೆ. ಹೊಸ ಸಂಸತ್ ಕಟ್ಟಡವು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸುಭಾಸ್ ಚಂದ್ರ ಬೋಸ್ ಮತ್ತು ದೇಶದ ಇತರ ಪ್ರಧಾನ ಮಂತ್ರಿಗಳ ಭಾವಚಿತ್ರಗಳನ್ನು ಹೊಂದಿರುತ್ತದೆ. ಕೋನಾರ್ಕ್ನ ಸೂರ್ಯ ದೇವಾಲಯದ ಚಕ್ರದ ಮಾದರಿಯೊಂದಿಗೆ ಬಹುಮುಖಿ ಕೌಟಿಲ್ಯನ ಭಾವಚಿತ್ರವನ್ನು ಕಟ್ಟಡದಲ್ಲಿ ಸ್ಥಾಪಿಸಲಾಗಿದೆ.