ಕಾಡಾನೆಗಳ ಸೆರೆಗೆ ಹೆಣ್ಣಾನೆಗಳನ್ನ ಫೀಲ್ಡಿಗಿಳಿಸಿದ ಅಧಿಕಾರಿಗಳು – ವರ್ಕೌಟ್ ಆಗುತ್ತಾ ‘ಹನಿಟ್ರ್ಯಾಪ್’ ಪ್ಲ್ಯಾನ್?
ಕಾಡಾನೆಗಳು ಹಾಗೂ ಮಾನವರ ನಡುವಿನ ಸಂಘರ್ಷ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ. ಕಾಡಂಚಿನ ಗ್ರಾಮಗಳಿಗೆ ನುಗ್ಗುವ ಗಜಪಡೆ ಬೆಳೆ ನಾಶ ಮಾಡುವುದರ ಜೊತೆಗೆ ಮನುಷ್ಯರ ಮೇಲೂ ದಾಳಿ ನಡೆಸುತ್ತಿವೆ. ಸದ್ಯ ಮಡಿಕೇರಿಯಲ್ಲೂ ಕಾಡಾನೆ ದಾಳಿಯಿಂದ ಕಾರ್ಮಿಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದ ಮಸ್ಕಲ್ ಕಾಫಿತೋಟದಲ್ಲಿ ಕಾಡಾನೆ ದಾಳಿ ನಡೆಸಿದ್ದು ಕಾರ್ಮಿಕ ಗಾಯಗೊಂಡಿದ್ದಾನೆ. ಬಾಬಿ(40) ಗಾಯಗೊಂಡ ಕಾರ್ಮಿಕ. ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಅಮ್ಮತ್ತಿ ಆಸ್ಪತ್ರೆಯಲ್ಲಿ ಗಾಯಾಳು ಬಾಬಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ ಮಾಡಲಾಗಿದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಕೂಡ ಮುಂದುವರಿದಿದ್ದು, ಸಕಲೇಶಪುರ ತಾಲೂಕಿನ ಗುಳಗಳಲೆ ಹಾಗೂ ಹೆಬ್ಬನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಕಾಡಾನೆ ದಾಳಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ : ಸೋಲಿನ ಆಘಾತದಿಂದ ಹೊರ ಬಾರದ ರೇಣುಕಾಚಾರ್ಯ – ತಾವು ಆರಂಭಿಸಿದ್ದ ಕಾಮಗಾರಿ ಸ್ಥಳಗಳಲ್ಲಿ ಸುತ್ತಾಟ!
ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಕಾಡಾನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಹನಿ ಟ್ಯ್ರಾಪ್ ಮೊರೆ ಹೋಗಿದೆ. ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಹೆಣ್ಣಾನೆ ಮೋಹಕ್ಕೆ ಬಿದ್ದು, ಕಾಡಾನೆಗಳು ಸೆರೆ ಸಿಗುವ ಸಾಧ್ಯತೆ ಇದೆ. ಹೀಗಾಗಿ ಮೇ.25 ರವರೆಗೆ ಸಕಲೇಶಪುರ, ಬೇಲೂರು ವಲಯಗಳಲ್ಲಿ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆಯಲಿದೆ. ರೇಡಿಯೋ ಕಾಲರ್ ಅಳವಡಿಕೆಗೆ ಸಾಕಾನೆಗಳನ್ನು ಬಳಸಿಕೊಳ್ಳಲಾಗಿದ್ದು, ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು ಮತ್ತು ಮಹೇಂದ್ರ ಹಾಗೂ ದುಬಾರೆ ಆನೆ ಶಿಬಿರದಿಂದ ಅಜ್ಜಯ್ಯ, ಪ್ರಶಾಂತ ಮತ್ತು ವಿಕ್ರಮ ಆನೆಗಳನ್ನು ಕರೆಸಿಕೊಳ್ಳಲಾಗಿದೆ. ಈ ಆನೆಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಿರುವ ಬೇಲೂರು ವಲಯದ, ಬಿಕ್ಕೋಡು ಸಸ್ಯಕ್ಷೇತ್ರದ ಕ್ಯಾಂಪ್‌ನಲ್ಲಿ ಇರಿಸಲಾಗಿದೆ. ಈ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸೂಚನೆಗಳನ್ನು ಪಾಲಿಸಿ ಸಾರ್ವಜನಿಕರು ಸಹಕರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದರು.