ಶೆಟ್ಟರ್ ಭೇಟಿಯಾಗಿ ಪರಮೇಶ್ವರ್, ದಿನೇಶ್ ಧನ್ಯವಾದ ಸಲ್ಲಿಕೆ – ಪಕ್ಷ & ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನದ ಭರವಸೆ!
ವಿಧಾನಸಭಾ ಚುನಾವಣೆ ಹೊತ್ತಲ್ಲಿ ಟಿಕೆಟ್ ಸಿಗದೆ ಸಾಕಷ್ಟು ನಾಯಕರು ಪಕ್ಷಾಂತರ ಮಾಡಿದ್ರು. ಅದರಲ್ಲಿ ಮಾಜಿ ಸಿಎಂ ಹಾಗೂ ಹಿರಿಯ ರಾಜಕಾರಣಿ ಜಗದೀಶ್ ಶೆಟ್ಟರ್ ಕೂಡ ಒಬ್ಬರು. ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಸತತ 6 ಬಾರಿ ಗೆದ್ದು ಈ ಬಾರಿ ಬಿಜೆಪಿ ಟಿಕೆಟ್ ಸಿಗದೆ ಕಾಂಗ್ರೆಸ್ ಪಕ್ಷ ಸೇರಿದ್ರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಕೂಡ ಚುನಾವಣೆಯಲ್ಲಿ ಸೋಲನುಭವಿಸಬೇಕಾಯ್ತು. ಆದರೆ ಶೆಟ್ಟರ್ ಸೇರ್ಪಡೆಯಿಂದ ಪಕ್ಷಕ್ಕೆ ಲಾಭವಾಗಿದೆ ಎಂದು ಕಾಂಗ್ರೆಸ್ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಸೋಲಿನ ಆಘಾತದಿಂದ ಹೊರ ಬಾರದ ರೇಣುಕಾಚಾರ್ಯ – ತಾವು ಆರಂಭಿಸಿದ್ದ ಕಾಮಗಾರಿ ಸ್ಥಳಗಳಲ್ಲಿ ಸುತ್ತಾಟ!
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರ ಸದಾಶಿವನಗರ ನಿವಾಸಕ್ಕೆ ಮಂಗಳವಾರ ಹೈಕಮಾಂಡ್ ಸೂಚನೆ ಮೇರೆಗೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ (G Parmeshwara), ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ (Dinesh Gundurao) ಭೇಟಿ ನೀಡಿ ಧನ್ಯವಾದ ಸಮರ್ಪಿಸಿದ್ದಾರೆ. ಈ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್, ಬಿಜೆಪಿ ಲಿಂಗಾಯತರನ್ನು (Lingayat) ಅವಮಾನಿಸಿದ್ದಕ್ಕೆ ಅಧಿಕಾರ ಕಳೆದುಕೊಂಡಿದೆ. ಬಿಎಸ್ ಯಡಿಯೂರಪ್ಪ ಅವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು ಅಂತಾ ಹೇಳಬೇಕಲ್ವಾ? ಬಿಎಸ್ ಯಡಿಯೂರಪ್ಪ ಕಣ್ಣೀರು ಹಾಕಿದರು. ನನಗೆ ಟಿಕೆಟ್ ಕೊಡದೆ ಅವಮಾನಿಸಿದ್ದರು. ಇದೆಲ್ಲವೂ ಬಿಜೆಪಿ ಹೀನಾಯವಾಗಿ ಸೋಲಲು ಕಾರಣವಾಯಿತು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿ.ಎಲ್ ಸಂತೋಷ್ ಪಕ್ಷವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ನನ್ನನ್ನು ಟಾರ್ಗೆಟ್ ಮಾಡಿ ಸೋಲಿಸಿದರು. ಬಿಜೆಪಿಯ ಇವತ್ತಿನ ಪರಿಸ್ಥಿತಿಗೆ ಕೆಲವರ ದುರಹಂಕಾರವೇ ಕಾರಣ. ಅನೇಕರಿಗೆ ದುರಹಂಕಾರ ಬಂದಿದೆ, ಹೀಗಾಗಿ ಪಕ್ಷಕ್ಕೆ ಈ ಗತಿ ಬಂದಿದೆ ಎಂದು ಬಿ.ಎಲ್ ಸಂತೋಷ್ ವಿರುದ್ಧ ವಾಗ್ದಾಳಿ ಮಾಡಿದರು. ಲಿಂಗಾಯತರು ಕಾಂಗ್ರೆಸ್ ಕಡೆ ಬಂದಿದ್ದಾರೆ. ಇನ್ಮುಂದೆಯೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಮುಂದುವರಿಯುತ್ತೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪರ್ಯಾಯ ಶಕ್ತಿ ರಚನೆ ಆಗುತ್ತಿದೆ. ಅದರ ಮುಂದಾಳತ್ವ ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದರು.
ಇನ್ನು ದಿನೇಶ್ ಗುಂಡೂರಾವ್ ಮತ್ತು ಡಾ. ಜಿ ಪರಮೇಶ್ವರ್ ಭೇಟಿ ವೇಳೆ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ಗೆ ಬಂದ ಮೇಲೆ ಸಕ್ರಿಯರಾಗಿ ಕೆಲಸ ಮಾಡಿದ್ದೀರಿ. 136 ಸ್ಥಾನ ಬರುವಲ್ಲಿ ನಿಮ್ಮ ಪಾತ್ರವೂ ಇದೆ. ಮುಂದಿನ ಲೋಕಸಭಾ ಎಲೆಕ್ಷನ್ ಹಿನ್ನೆಲೆ ಸಹಕಾರ ಮುಂದುವರೆಯಲಿ. ನಿಮಗೆ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನ ನೀಡುವ ಇಚ್ಛೆ ಹೈಕಮಾಂಡ್ಗೆ ಇದೆ. ಇನ್ಮುಂದೆ ಕಾಂಗ್ರೆಸ್ ಗುರಿ ಲೋಕಸಭಾ ಚುನಾವಣೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಇಬ್ಬರು ನಾಯಕರು ಶೆಟ್ಟರ್ಗೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.