ಆಡಳಿತ ಪಕ್ಷವಾಗಿದ್ರೂ ಜನಮನ ಗೆಲ್ಲುವಲ್ಲಿ ಫೇಲ್ – ಹೀನಾಯ ಸೋಲಿಗೆ ಕಾರಣ ಹುಡುಕಿದ ಬಿಜೆಪಿ ನಾಯಕರು!
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಚಂಡ ಗೆಲುವು ಸಾಧಿಸಿದ್ದು ಆಡಳಿತ ಪಕ್ಷವಾಗಿದ್ದ ಬಿಜೆಪಿ ಹೀನಾಯವಾಗಿ ಸೋಲನುಭವಿಸಿದೆ. ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿ ನಿರೀಕ್ಷೆಗೂ ಮೀರಿ ಕ್ಷೇತ್ರಗಳನ್ನ ಕಳೆದುಕೊಂಡಿದೆ. ಹಲವು ಕ್ಷೇತ್ರಗಳಲ್ಲಿ ಗೆಲ್ಲುವ ಕುದುರೆಗಳು ಎನಿಸಿಕೊಂಡಿದ್ದ ಅಭ್ಯರ್ಥಿಗಳೇ ಸೋತಿದ್ದಾರೆ. ಹೀಗಾಗಿ ಫಲಿತಾಂಶ ಹೊರಬಿದ್ದ ದಿನದಿಂದ ಬಿಜೆಪಿ ಕಲಿಗಳು ಸಾಲು ಸಾಲು ಸಭೆ ನಡೆಸುತ್ತಿದ್ದಾರೆ. ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಸೋಲಿನ ಕಾರಣಗಳನ್ನ ಹುಡುಕುತ್ತಿದ್ದಾರೆ.
ಇದನ್ನೂ ಓದಿ : ಸಿದ್ದು-ಡಿಕೆಶಿ ಸಿಎಂ ಗದ್ದುಗೆ ಗುದ್ದಾಟ – ರಾಜಸ್ಥಾನದಂತೆಯೇ ಆಗುತ್ತಾ ಕರ್ನಾಟಕದ ಪರಿಸ್ಥಿತಿ..?
135 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಫಲಿತಾಶದಿಂದ ಬಿಜೆಪಿ(BJP) ನಾಯಕರಿಗೆ ಶಾಕ್ ಆಗಿದೆ. ಅಲ್ಲದೇ ಹೀನಾಯ ಸೋಲಿಗೆ ಬಿಜೆಪಿ ಕಾರಣಗಳನ್ನು ಹುಡುಕುತ್ತಿದೆ. ಸೋಲಿಗೆ ಒಂದೊಂದೇ ಕಾರಣ ಹುಡುಕುವಲ್ಲಿ ಬಿಜೆಪಿ ಮಗ್ನವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕಾತಿಯಲ್ಲಿನ ಬದಲಾವಣೆ ಸೋಲಿಗೆ ಪ್ರಧಾನ ಕಾರಣ ಎಂಬ ಮಾಹಿತಿಯನ್ನ ಪಡೆದುಕೊಂಡಿದೆ. ಅಷ್ಟಕ್ಕೂ ಚುನಾವಣೆಯಲ್ಲಿ ಬಿಜೆಪಿ ತನ್ನ ಸೋಲಿಗೆ ಕಂಡುಕೊಂಡಿರುವ ಕಾರಣಗಳು ಏನು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಸೋಲಿಗೆ ಬಿಜೆಪಿ ಹುಡುಕಿರುವ ಕಾರಣಗಳು
- ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕಾತಿಯಲ್ಲಿನ ಬದಲಾವಣೆ ಸೋಲಿಗೆ ಪ್ರಧಾನ ಕಾರಣ. ಆಯಾ ಜಿಲ್ಲೆಗಳ ಸಚಿವರನ್ನು ಬಿಟ್ಟು ಬೇರೆ ಜಿಲ್ಲೆಗಳ ಸಚಿವರನ್ನು ಉಸ್ತುವಾರಿ ಮಾಡಿ ಪ್ರಯೋಗ ಮಾಡಿದ್ದೇ ಸೋಲಿಗೆ ಪ್ರಮುಖ ಕಾರಣ. ಉಸ್ತುವಾರಿ ಸಚಿವರು ಜಿಲ್ಲೆಗಳಿಂದ ನಿಖರ ಮಾಹಿತಿ ತೆಗೆಯುವಲ್ಲಿ ವಿಫಲವಾಗಿದ್ದು, ತಮ್ಮ ಸ್ವಂತ ಜಿಲ್ಲೆ ಅಲ್ಲ ಎಂಬ ಕಾರಣಕ್ಕೆ ಉಸ್ತುವಾರಿ ಸಚಿವರು ಆಸಕ್ತಿ ತೋರಿಸಿಲ್ಲ. ಹೀಗಾಗಿ ಜಿಲ್ಲೆಗಳ ವಾಸ್ತವ ಸ್ಥಿತಿ ಮಾಹಿತಿ ಪಡೆಯುವಲ್ಲಿ ರಾಜ್ಯ ಬಿಜೆಪಿ ವಿಫಲವಾಗಿದೆ.
- ನಿಗಮ ಮತ್ತು ಮಂಡಳಿಗಳಲ್ಲಿ ಸೂಕ್ತವಲ್ಲದ ನೇಮಕಾತಿಯಿಂದಲೂ ಪಕ್ಷಕ್ಕೆ ನಷ್ಟ. ಬೆಂಗಳೂರು ವ್ಯಾಪ್ತಿಗೆ ಸಂಬಂಧಿಸಿದ ನಿಗಮ-ಮಂಡಳಿಗೆ ಹೊರಗಿನವರ ನೇಮಕಾತಿ ಕೂಡ ಹೊಡೆತ.
- ಬೆಂಗಳೂರಿನಲ್ಲಿ ಮಾತ್ರ ಪ್ರಧಾನಿ ಮೋದಿ ವರ್ಚಸ್ಸು ಪಕ್ಷಕ್ಕೆ ವರ್ಕೌಟ್ ಆಗಿದೆ. ಮೋದಿ ಅಲೆ ಇದೆ ಎಂದು ಅತಿಯಾಗಿ ನಂಬಿಕೊಂಡಿದ್ದು ಕೂಡಾ ಹಿನ್ನಡೆಗೆ ಕಾರಣ.
- ಹಳೆ ಮೈಸೂರು ಭಾಗದಲ್ಲಿ 1:10 ಮತ ಪ್ರಮಾಣ ಹೆಚ್ಚಳವಾದರೂ ಲಾಭವಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಜೆಡಿಎಸ್ ಮತಗಳನ್ನು ಕಸಿದಿದ್ದು ಕಾಂಗ್ರೆಸ್ ಪಕ್ಷಕ್ಕೆ ಲಾಭ.
- ಕೆಲವು ಕಡೆ ಅಭ್ಯರ್ಥಿಗಳ ಬದಲಾವಣೆಯಿಂದ ಕೈಕೊಟ್ಟ ಗೆಲ್ಲುವ ಅವಕಾಶ
- ಬಿಜೆಪಿ ಲೆಕ್ಕಾಚಾರ ಬದಲಿಸಿದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಸ್ಕೀಮ್ ಗಳು. ಮಹಿಳಾ ಮತದಾರರು, ಸ್ತ್ರೀ ಶಕ್ತಿ ಸಂಘಗಳು ಮತ್ತಿತರ ಕಡೆ ಅಂಡರ್ ಕರೆಂಟ್ ಆದ ಗ್ಯಾರಂಟಿ ಸ್ಕೀಮ್ ಗಳು.