CSK, RCB ಟೀಮ್ ಗಳಿಗಿದ್ಯಾ ಪ್ಲೇ ಆಫ್ ಭಾಗ್ಯ – ಐಪಿಎಲ್ ನಲ್ಲಿ ಯಾವ ತಂಡಕ್ಕೆ ಅದೃಷ್ಟ..?
ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ಬಡಿಸುತ್ತಿರುವ ಐಪಿಎಲ್ ಸೀಸನ್ 16 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ತಲುಪಿವೆ. ಈಗಾಗಲೇ 60ಕ್ಕೂ ಹೆಚ್ಚು ಪಂದ್ಯಗಳು ಮುಗಿದರೂ ಒಂದೇ ಒಂದು ತಂಡ ಪ್ಲೇಆಫ್ ಪ್ರವೇಶಿಸುವುದನ್ನು ಖಚಿತಪಡಿಸಿಕೊಂಡಿಲ್ಲ. 10 ತಂಡಗಳ ಪೈಕಿ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವುದು ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ. ಅಂದರೆ ಇನ್ನು 9 ತಂಡಗಳಿಗೆ ಪ್ಲೇಆಫ್ಗೆ ಪ್ರವೇಶಿಸಲು ಅವಕಾಶವಿದೆ. ಹಾಗೆಯೇ 4 ಸ್ಥಾನಕ್ಕಾಗಿ 6 ತಂಡಗಳ ನಡುವೆ ನೇರ ಪೈಪೋಟಿ ಇದೆ.
ಸದ್ಯ ಪಾಯಿಂಟ್ಸ್ ಟೇಬಲ್ನಲ್ಲಿ ಗುಜರಾತ್ ಟೈಟಾನ್ಸ್ ಅಗ್ರಸ್ಥಾನದಲ್ಲಿದ್ದು 12 ಪಂದ್ಯಗಳನ್ನ ಆಡಿದೆ. ಈ ಪೈಕಿ 8ರಲ್ಲಿ ಜಯ ಸಾಧಿಸಿ 16 ಅಂಕ ಪಡೆದುಕೊಂಡಿದೆ. ಇನ್ನುಳಿದಿರುವ 2 ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸಿದರೆ ಪ್ಲೇಆಫ್ ಪ್ರವೇಶಿಸಬಹುದು. ಒಂದು ವೇಳೆ ಮುಂದಿನ 2 ಪಂದ್ಯಗಳಲ್ಲಿ ಸೋತರೆ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ ಪ್ರವೇಶಿಸಬೇಕಾಗುತ್ತದೆ. ಇದೇ ವೇಳೆ ಇತರೆ ತಂಡ 16 ಪಾಯಿಂಟ್ಸ್ನೊಂದಿಗೆ ಉತ್ತಮ ನೆಟ್ ರನ್ ರೇಟ್ ಹೊಂದಿದ್ದರೆ ಗುಜರಾತ್ ಕೂಡ ಅಗ್ರ-4 ರಿಂದ ಹೊರಬೀಳಬಹುದು.
ಇದನ್ನೂ ಓದಿ : ಸುನಿಲ್ ಗವಾಸ್ಕರ್ ಶರ್ಟ್ ಮೇಲೆ ಧೋನಿ ಆಟೋಗ್ರಾಫ್ – ಕ್ರಿಕೆಟ್ ಲೋಕದ ಹೆಮ್ಮೆಯ ಕ್ಷಣ ಕಣ್ತುಂಬಿಕೊಂಡ ಅಭಿಮಾನಿಗಳು
ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮುಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಏಕೆಂದರೆ ಆಡಿರುವ 13 ಪಂದ್ಯಗಳಲ್ಲಿ ಸಿಎಸ್ಕೆ 7 ರಲ್ಲಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯ ರದ್ದಾದ ಕಾರಣ ಒಟ್ಟು 15 ಅಂಕಗಳನ್ನು ಪಡೆದುಕೊಂಡಿದೆ. ಅದರಂತೆ ತನ್ನ ಕೊನೆಯ ಪಂದ್ಯದಲ್ಲಿ ಸಿಎಸ್ಕೆ ಗೆದ್ದರೆ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಒಂದು ವೇಳೆ ಸೋತರೆ ಪ್ಲೇಆಫ್ ರೇಸ್ನಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ. 12 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ಪ್ಲೇಆಫ್ ಖಚಿತಪಡಿಸಿಕೊಳ್ಳಲು ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕು. ಒಂದು ವೇಳೆ 2 ಪಂದ್ಯದಲ್ಲಿ ಸೋತರೆ ಪ್ಲೇಆಫ್ ರೇಸ್ನಿಂದ ಹೊರಬೀಳಬಹುದು. ಹಾಗೆಯೇ 1 ಪಂದ್ಯದಲ್ಲಿ ಮಾತ್ರ ಗೆದ್ದರೆ 16 ಪಾಯಿಂಟ್ಸ್ನೊಂದಿಗೆ ಇತರೆ ತಂಡಗಳಿಗಿಂತ ಉತ್ತಮ ನೆಟ್ ರನ್ ಹೊಂದಿದ್ದರೆ ಮಾತ್ರ ಪ್ಲೇಆಫ್ ಪ್ರವೇಶಿಸಬಹುದು.
ಲಕ್ನೋ ಸೂಪರ್ ಜೈಂಟ್ಸ್ ಆಡಿರುವ 12 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ರದ್ದಾದ ಕಾರಣ 1 ಪಾಯಿಂಟ್ಸ್ ಪಡೆದುಕೊಂಡಿದೆ. ಅದರಂತೆ ಇದೀಗ 13 ಅಂಕಗಳನ್ನು ಹೊಂದಿರುವ ಲಕ್ನೋ ಸೂಪರ್ ಜೈಂಟ್ಸ್ ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ನೇರವಾಗಿ ಪ್ಲೇಆಫ್ ಪ್ರವೇಶಿಸಬಹುದು. ಇದರಲ್ಲಿ ಒಂದು ಪಂದ್ಯವನ್ನು ಸೋತರೂ ಪ್ಲೇಆಫ್ ರೇಸ್ನಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿರುವ 12 ಪಂದ್ಯಗಳಲ್ಲಿ 6 ರಲ್ಲಿ ಜಯಗಳಿಸಿ ಒಟ್ಟು 12 ಪಾಯಿಂಟ್ಸ್ ಪಡೆದುಕೊಂಡಿದೆ. ಇನ್ನುಳಿದಿರುವ 2 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ನೆಟ್ ರನ್ ರೇಟ್ನೊಂದಿಗೆ ಅಗ್ರ-4 ರಲ್ಲಿ ಕಾಣಿಸಿಕೊಳ್ಳುವ ಅವಕಾಶ ಹೊಂದಿದೆ. ಒಂದು ವೇಳೆ ಮುಂದಿನ 2 ಪಂದ್ಯಗಳಲ್ಲಿ ಒಂದರಲ್ಲಿ ಸೋತರೂ ಆರ್ಸಿಬಿ ತಂಡದ ಪ್ಲೇಆಫ್ ಕನಸು ಕಮರಿ ಹೋಗಬಹುದು. ಪಂಜಾಬ್ ಕಿಂಗ್ಸ್ ತಂಡವು ಆಡಿರುವ 12 ಪಂದ್ಯಗಳಲ್ಲಿ 6 ರಲ್ಲಿ ಗೆಲುವು ದಾಖಲಿಸಿದೆ. ಇನ್ನುಳಿದಿರುವ 2 ಪಂದ್ಯಗಳಲ್ಲಿ ಗೆದ್ದರೆ 16 ಪಾಯಿಂಟ್ಸ್ ಆಗಲಿದೆ. ಈ ಮೂಲಕ ಉತ್ತಮ ನೆಟ್ ರನ್ ರೇಟ್ನೊಂದಿಗೆ ಪ್ಲೇಆಫ್ ಪ್ರವೇಶಿಸಬಹುದು.
ಅಂದರೆ ಇಲ್ಲಿ 6 ತಂಡಗಳ ನಡುವೆ ಅಗ್ರ-4 ಕ್ಕೇರಲು ನೇರ ಪೈಪೋಟಿ ಇದೆ. ಒಂದು ವೇಳೆ ಲಕ್ನೋ ತಂಡವು ಮುಂದಿನ ಪಂದ್ಯದಲ್ಲಿ ಸೋತರೆ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ಗೆ ಅಂಕಪಟ್ಟಿಯಲ್ಲಿ 16 ಪಾಯಿಂಟ್ಸ್ನೊಂದಿಗೆ 4ನೇ ಸ್ಥಾನಕ್ಕೇರಲು ಉತ್ತಮ ಅವಕಾಶವಿದೆ. ಲಕ್ನೋ ತಂಡವು ಪ್ರಸ್ತುತ 13 ಪಾಯಿಂಟ್ಸ್ ಹೊಂದಿದ್ದು, ಮುಂದಿನ 2 ಪಂದ್ಯಗಳಲ್ಲಿ 1 ರಲ್ಲಿ ಸೋತು, 1 ರಲ್ಲಿ ಗೆದ್ದರೂ ಒಟ್ಟು ಪಾಯಿಂಟ್ಸ್ 15 ಆಗಲಿದೆ. ಇತ್ತ 16 ಅಂಕಗಳಿಸಲು ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ಗೆ ಉತ್ತಮ ಅವಕಾಶವಿದೆ. ಹೀಗಾಗಿ ಲಕ್ನೋ ತಂಡದ ಮುಂದಿನ ಪಂದ್ಯಗಳ ಫಲಿತಾಂಶವು ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಲಿದೆ.
ಇನ್ನು ಕೆಕೆಆರ್, ರಾಜಸ್ಥಾನ್ ರಾಯಲ್ಸ್ ಹಾಗೂ ಎಸ್ಆರ್ಹೆಚ್ ತಂಡಗಳಿಗೆ ಪ್ಲೇಆಫ್ ಪ್ರವೇಶಿಸಲು ಅವಕಾಶ ಸಿಗಬೇಕಿದ್ದರೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ತಂಡವೊಂದು 14 ಪಾಯಿಂಟ್ಸ್ಗಳಿಸಬೇಕು. ಇದರಿಂದ ಮುಂದಿನ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ನೆಟ್ ರನ್ರೇಟ್ಗಳ ಮೂಲಕ ಪ್ಲೇಆಫ್ ಪ್ರವೇಶಿಸಲು ಈ ಮೂರು ತಂಡಗಳಿಗೂ ಅವಕಾಶ ಇರಲಿದೆ. ಒಂದು ವೇಳೆ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯ ಗೆದ್ದು, ಲಕ್ನೋ ಸೂಪರ್ ಜೈಂಟ್ಸ್ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿದರೆ ಕೊಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಪ್ಲೇಆಫ್ ರೇಸ್ನಿಂದ ಹೊರಬೀಳಲಿದೆ.