ತಂದೆ-ತಾಯಿ, ಹೆಂಡತಿ, ಮಕ್ಕಳ ಜೊತೆ ಕಾಲ ಕಳೆಯಿರಿ – ಕಾಂಗ್ರೆಸ್ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕಿವಿಮಾತು!
ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಮುಗಿದಿದೆ. ಚುನಾವಣೋತ್ತರ ಫಲಿತಾಂಶ ಹೊರಬಿದ್ದಿದ್ದು ಈಗಾಗಲೇ ಪಕ್ಷಗಳಲ್ಲಿ ಲೆಕ್ಕಾಚಾರ ಶುರುವಾಗಿದೆ. ಮೇ 13ರಂದು ಫೈನಲ್ ರಿಸಲ್ಟ್ ಹೊರ ಬೀಳಲಿದ್ದು, ನಾಯಕರೆಲ್ಲಾ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸದ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ತಮ್ಮ ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯಿರಿ ಎಂದಿದ್ದಾರೆ.
ಇದನ್ನೂ ಓದಿ : ಪುತ್ತಿಲ Vs ಬಿಜೆಪಿ ಸಮರದಲ್ಲಿ ‘ಕೈ’ಗೆ ಲಕ್? – ಪುತ್ತೂರು ಕ್ಷೇತ್ರದಲ್ಲಿ ಜೋರಾಯ್ತು ಬೆಟ್ಟಿಂಗ್!
ವಿಧಾನಸಭೆ ಮತದಾನಕ್ಕೆ ಬುಧವಾರ ತೆರೆ ಬಿದ್ದಿದ್ದು, ಮತದಾನದ ಮುಕ್ತಾಯದ ಬಳಿಕ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ನನ್ನದೊಂದು ವಿಶೇಷ ಮನವಿಯಾಗಿದೆ. ಚುನಾವಣೆಗಾಗಿ ಮನೆ ಮತ್ತು ಸಂಸಾರ ತೊರೆದು ಕೆಲಸ ಮಾಡಿದ್ದೀರಿ. ಈಗ ಸ್ವಲ್ಪ ಬಿಡುವು ಮಾಡಿಕೊಂಡು ತಂದೆ-ತಾಯಿ, ಹೆಂಡತಿ, ಮಕ್ಕಳ ಜೊತೆ ಕಾಲ ಕಳೆಯಿರಿ. ಪ್ರಾಮಾಣಿಕವಾದ ನಮ್ಮ ಹೋರಾಟ ಖಂಡಿತ ಫಲಪ್ರದವಾಗುತ್ತದೆ. ಮತ್ತೊಮ್ಮೆ ನಿಮಗೆಲ್ಲರಿಗೆ ಧನ್ಯವಾದಗಳು ಮತ್ತು ಶುಭಾಶಯಗಳು ಎಂದರು.
ಕಾಂಗ್ರೆಸ್ ಪಕ್ಷದ ಹೆಮ್ಮೆಯ ಕಾರ್ಯಕರ್ತರು ಮತ್ತು ಅಭಿಮಾನಿ ಬಂಧುಗಳೇ, ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿಗಳ ಪರವಾಗಿ ರಾತ್ರಿ-ಹಗಲೆನ್ನದೆ, ಊಟ, ತಿಂಡಿ, ವಿಶ್ರಾಂತಿಯನ್ನು ಮರೆತು ನಿರಂತರವಾಗಿ ಕೆಲಸ ಮಾಡಿದ ನಿಮಗೆಲ್ಲರಿಗೂ ಅಭಿನಂದನೆಗಳು ಮತ್ತು ನನ್ನ ಧನ್ಯವಾದಗಳು. ನಾನು ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಮಾತ್ರವಲ್ಲ, ಬೇರೆ ರಾಜ್ಯಗಳಿಂದಲೂ ಬಂದು ನನ್ನ ಮೇಲಿನ ಪ್ರೀತಿ-ಅಭಿಮಾನದಿಂದ ತಮ್ಮ ಪಾಡಿಗೆ ತಾವು ಪ್ರಚಾರ ಮಾಡಿದ್ದಾರೆ. ಅವರೆಲ್ಲರನ್ನು ನನಗೆ ಭೇಟಿ ಮಾಡಿ ಧನ್ಯವಾದಗಳನ್ನು ತಿಳಿಸಲು ಕೂಡಾ ಸಾಧ್ಯವಾಗಿಲ್ಲ. ಈ ಪ್ರೀತಿ ಮತ್ತು ಅಭಿಮಾನವೇ ನನ್ನ ಮತ್ತು ಕಾಂಗ್ರೆಸ್ ಪಕ್ಷದ ಶಕ್ತಿ. ಇವರೆಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನು ಟ್ವೀಟ್ನಲ್ಲಿ ತಿಳಿಸಿದ್ದಾರೆ.