ಗ್ರಾಹಕರ ಪಾಲಿಗೆ ಖಾರವಾದ ಮೆಣಸಿನಕಾಯಿ – ಗಗನಕ್ಕೇರಿದ ಮೆಣಸಿನಕಾಯಿ ದರ
ಮೆಣಸಿನಕಾಯಿಯನ್ನು ಬಹುತೇಕ ಖಾದ್ಯಗಳಲ್ಲಿ ಬಳಲಾಗುತ್ತದೆ. ಆದರೆ ಅಡುಗೆಗೆ ಅಗತ್ಯವಾಗಿ ಬೇಕಾಗಿರುವ ಮೆಣಸಿನಕಾಯಿ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಗ್ರಾಹಕರ ಪಾಲಿಗೆ ಖಾರವಾಗಿ ಪರಿಣಮಿಸಿದೆ.
ಮೆಣಸಿನಕಾಯಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಕೇವಲ ಎರಡು ತಿಂಗಳ ಅಂತರದಲ್ಲಿ ಮೆಣಸಿನಕಾಯಿ ದರ ಗಣನೀಯವಾಗಿ ಏರಿಕೆ ಕಂಡಿದ್ದು, ಗ್ರಾಹಕರಿಗೆ ಕಣ್ಣೀರು ಬರುವಂತೆ ಮಾಡಿದೆ. ಉತ್ತಮ ಗುಣಮಟ್ಟದ ಸಾಮಾನ್ಯ ಕೆಂಪು ಮೆಣಸಿನಕಾಯಿ ಕೆಜಿಗೆ 610 ರೂಪಾಯಿ ಇದ್ದರೆ, ಕಡಿಮೆ ಖಾರ ಹಾಗೂ ಹೆಚ್ಚು ಕೆಂಪು ಬಣ್ಣದ ಕಾಶ್ಮೀರ ಮೆಣಸಿನಕಾಯಿ ಕೆಜಿಗೆ 750 ರೂಪಾಯಿ ಇದೆ. ಕಳೆದ ಜನವರಿಯಲ್ಲಿ ಕೆಂಪು ಮೆಣಸಿಕಾಯಿ ಕ್ವಿಂಟಲ್ಗೆ 70,199 ರೂಪಾಯಿಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ದುಬಾರಿ ಬೆಲೆಗೆ ಮಾರಾಟವಾಯ್ತು ಮಾವಿನ ಹಣ್ಣು! – ಒಂದು ಹಣ್ಣಿನ ರೇಟ್ ಎಷ್ಟು ಗೊತ್ತಾ?
ರಾಜ್ಯದ ವಿವಿಧ ಭಾಗಗಳಿಗೆ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡದಿಂದ ಒಣ ಮೆಣಸಿನಕಾಯಿ ಪೂರೈಕೆಯಾಗುತ್ತಿದೆ. ಹೊರರಾಜ್ಯದಿಂದಲೂ ಮೆಣಸಿನಕಾಯಿ ಸರಬರಾಜು ಮಾಡಲಾಗುತ್ತಿದೆ. ಕಳೆದ ವರ್ಷ 350 ರೂ.ನಿಂದ 400 ರೂ. ಇದ್ದರೆ, ಈ ವರ್ಷ ಏಕಾಏಕಿ 600 ರೂ.ಗಳನ್ನು ದಾಟಿದೆ. ಇನ್ನು ರಖಂ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಕನಿಷ್ಠ 350 ರೂಪಾಯಿ ಇದ್ದರೆ, ಗರಿಷ್ಠ 540 ರೂಪಾಯಿ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ರಿಟೇಲ್ 550 ರೂ.ನಿಂದ 610 ರೂ.ವರೆಗೆ ಇದೆ ಎನ್ನಲಾಗಿದೆ.
ಇನ್ನು ಮಾಂಸಾಹಾರಿ ಹೋಟೆಲ್ ಗಳಲ್ಲಿ ಬ್ಯಾಡಗಿ ಮೆಣಸಿನಕಾಯಿ, ಕಾಶ್ಮೀರ ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಬೆಲೆ ಏರಿಕೆ ಹಿನ್ನೆಲೆ ಕೆಲ ಹೋಟೆಲ್ ಮಾಲೀಕರು ಬೆಲೆ ಹೆಚ್ಚಳ ಮಾಡಲು ಮಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.