ಮತದಾನ ಮಾಡಿ ಹೊರಬರುತ್ತಿದ್ದಂತೆ ಹೆರಿಗೆ – ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
![ಮತದಾನ ಮಾಡಿ ಹೊರಬರುತ್ತಿದ್ದಂತೆ ಹೆರಿಗೆ – ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ](https://suddiyaana.com/wp-content/uploads/2023/05/23.jpg)
ಕುರುಗೋಡು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ಮತದಾನ ಮಾಡಲು ಬಂದಿದ್ದ ತುಂಬು ಗರ್ಭಿಣಿಗೆ ಮತಕೇಂದ್ರದಲ್ಲಿಯೇ ಸಹಜ ಹೆರಿಗೆಯಾದ ಅಪರೂಪದ ಘಟನೆ ತಾಲ್ಲೂಕಿನ ಕೊರ್ಲಗುಂದಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ವೋಟ್ ಹಾಕಲು ಅಮೆರಿಕದಿಂದ ಬಂದ ವ್ಯಕ್ತಿ – ಮತಗಟ್ಟೆಯಲ್ಲಿ ಆಗಿದ್ದೇ ಬೇರೆ!
ಕೊರ್ಲಗುಂದಿ ಗ್ರಾಮದ ಮಣಿಲಾ ಎನ್ನುವ ತುಂಬು ಗರ್ಭಿಣಿ ಮತದಾನ ಮಾಡಲೆಂದು ಗ್ರಾಮದ ಮತಗಟ್ಟೆಗೆ ತೆರಳಿದ್ದರು. ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಹೊರಗೆ ಬರುತ್ತಿರುವ ವೇಳೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸ್ಥಳದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಚುನಾವಣಾ ಅಧಿಕಾರಿಗಳು ಕೂಡಲೇ ತಾಯಿ ಹಾಗೂ ನವಜಾತ ಶಿಶುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸೆಕ್ಟರ್ ಅಧಿಕಾರಿ ವೆಂಕಟೇಶ್ ರಾಮಚಂದ್ರಪ್ಪ, ಗರ್ಭಿಣಿಗೆ ಮತದಾನ ಕೇಂದ್ರದಲ್ಲಿಯೇ ಸಹಜ ಹೆರಿಗೆಯಾಗಿದೆ. ಚುನಾವಣಾ ಸಿಬ್ಬಂದಿ ಮತ್ತು ಮತದಾನಕ್ಕೆ ಬಂದಿದ್ದ ಮಹಿಳೆಯರು ಹೆರಿಗೆ ಮಾಡಿಸಲು ಸಹಕರಿಸಿದ್ದಾರೆ. ಕೂಡಲೇ ತಾಯಿ, ಮಗುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.