‘ಚುನಾವಣೆಯಲ್ಲಿ ಹಣದ ಕೊರತೆಯಿಂದ ನಮಗೆ ಹಿನ್ನಡೆ’ – ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬೇಸರ
ರಾಜ್ಯದಲ್ಲಿ ಮತದಾನ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಕೂಡಾ ಮತಚಲಾಯಿಸಿದ್ದಾರೆ. ತಮ್ಮ ಹಕ್ಕು ಚಲಾಯಿಸಿದ ನಂತರ ಮಾತನಾಡಿದ ಕುಮಾರಸ್ವಾಮಿ, ನಾಡಿನ ಜನತೆ ಮತದಾನ ಮಾಡುವುದರಿಂದ ವಂಚಿತರಾಗಬೇಡಿ ಎಂದು ಮನವಿ ಮಾಡ್ತೇನೆ. ನನಗೆ ಅತ್ಯಂತ ನೋವಾಗಿದೆ, ಹಲವಾರು ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲು ಆಗಿಲ್ಲ. ರಾಜ್ಯದಲ್ಲಿ ಈ ಬಾರಿ ನನ್ನ ಅಭ್ಯರ್ಥಿಗಳಿಗೆ ಹಣ ಒದಗಿಸಲು ಆಗಿಲ್ಲ. ಆರ್ಥಿಕ ನೆರವು ನೀಡುವುದರಲ್ಲಿ ವಿಫಲಗೊಂಡಿರೋದು ನನಗೆ ಆಘಾತವಾಗಿದೆ ಎಂದು ಬೇಸರದಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ: ನಿಮ್ಮ ಪತಿ ಸಿಎಂ ಆಗ್ತಾರಾ ಎನ್ನುವ ಪ್ರಶ್ನೆಗೆ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಹೇಳಿದ್ದೇನು ಗೊತ್ತಾ?
ಕೇತಗಾನಹಳ್ಳಿ ಮತಗಟ್ಟೆ ಬಳಿ ಮತ ಚಲಾವಣೆ ಮಾಡಿದ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಆದರೆ ಹಣದ ಕೊರತೆಯಿಂದಾಗಿ ನಮಗೆ ಹಿನ್ನಡೆಯಾಗಿದೆ. ಕನಿಷ್ಠ 25ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಹಣದ ಕೊರತೆಯಿಂದ ಹಿನ್ನಡೆಯಾಗಿದೆ. ಗೆಲ್ಲುವ ಕ್ಷೇತ್ರಗಳಲ್ಲಿ ಹಣದ ಕೊರತೆಯಿಂದ ಪೆಟ್ಟು ತಿಂದಿದ್ದೇನೆ. ನನ್ನಿಂದ ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆಯಾ ಕ್ಷೇತ್ರದ ಕೆಲವು ಬೂತ್ ಗಳಿಗೆ ಹಣ ನೀಡಲು ಆಗಿಲ್ಲ. ಕೊನೆಯ ಹಂತದಲ್ಲಿ ಅಭ್ಯರ್ಥಿಗಳ ನಿರೀಕ್ಷೆ ಮುಟ್ಟಲು ಆಗಿಲ್ಲ. ನಮ್ಮ ಅಭ್ಯರ್ಥಿಗಳ ಮೇಲೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಬೇಡಿ. ಆದರೂ ಕಾಂಗ್ರೆಸ್, ಬಿಜೆಪಿಗಿಂತ ಮುಂದೆ ಇರ್ತೇವೆ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಈ ಬಾರಿಯ ಚುನಾವಣೆ ಹಣದಿಂದ ನಡೆದಿದೆ. ನಾನೊಬ್ಬ ಯುವಕನಾಗಿ ನನಗೂ ಆತಂಕವಿದೆ. ಮುಂದೆ ಈ ವ್ಯವಸ್ಥೆಯನ್ನ ರಾಜ್ಯದ ಜನರು ಸರಿಪಡಿಸಬೇಕಿದೆ. ನಾವು ರಾಮನಗರದಲ್ಲಿ 25 ವರ್ಷಗಳಿಂದ ಸೇವೆ ಮಾಡಿದ್ದೇವೆ. ಜನರು ನಮ್ಮನ್ನ ಕೈ ಹಿಡಿಯುತ್ತಾರೆಂಬ ನಂಬಿಕೆಯಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.