ಆದಿಪುರುಷ್ ಟ್ರೈಲರ್ ರಿಲೀಸ್ – ರಾಮನಾಗಿ ಎಂಟ್ರಿಕೊಟ್ಟ ಪ್ರಭಾಸ್ ಲುಕ್ ನೋಡಿ ಅಭಿಮಾನಿಗಳಿಗೆ ಸಂತಸ

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾದ ಟ್ರೈಲರ್ ತೆರೆಗೆ ಬಂದಿದೆ. ರಾಮನಾಗಿ ಎಂಟ್ರಿ ಕೊಟ್ಟ ಟಾಲಿವುಡ್ ಸ್ಟಾರ್ ಪ್ರಭಾಸ್ ಲುಕ್ ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ದಿನಕ್ಕಾಗಿಯೇ ಪ್ರಭಾಸ್ ಅಭಿಮಾನಿಗಳು ಕಾಯುತ್ತಿದ್ದರು. ಈ ಮೊದಲು ತೆರೆಗೆ ಬಂದಿದ್ದ ಟೀಸರ್ ನೋಡಿ ಅಭಿಮಾನಿಗಳು ಭಾರಿ ನಿರಾಸೆ ಅನುಭವಿಸಿದ್ದರು. ಸಿನಿಮಾತಂಡದ ವಿರುದ್ಧ ಪ್ರಭಾಸ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು, ಟೀಸರ್ ಹಿಗ್ಗಾಮುಗ್ಗಾ ಟ್ರೋಲ್ ಆಗಿತ್ತು. ಆದರೀಗ ಟ್ರೈಲರ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಾಮನ ಅವತಾರದಲ್ಲಿ ಪ್ರಭಾಸ್ ನೋಡಿ ಸಂತಸ ಪಟ್ಟಿದ್ದಾರೆ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಗೆ ಕಾನೂನು ಸಂಕಷ್ಟ – ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವಿವಾದ
ರಿಲೀಸ್ ಆಗಿರುವ ಆದಿಪುರುಷ್ ಟ್ರೈಲರ್‌ನಲ್ಲಿ ಪ್ರಭಾಸ್ ಅಬ್ಬರಿಸಿದ್ದಾರೆ. ನಿರ್ದೇಶಕ ಓಂ ರಾವತ್ ಸಾರಥ್ಯದಲ್ಲಿ ಆದಿಪುರುಷ್ ಮೂಡಿಬಂದಿದೆ. ರಾಮನಾಗಿ ಪ್ರಭಾಸ್ ಕಾಣಿಸಿಕೊಂಡ್ರೆ ಸೀತೆಯಾಗಿ ಕೃತಿ ಸನೋನ್ ಮಿಂಚಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್, ಆಂಜನೇಯನಾಗಿ ದೇವದತ್ತ, ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸಿದ್ದಾರೆ. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಸದ್ಯ ಬಿಡುಗಡೆ ಆಗಿರುವ ಟ್ರೇಲರ್ ಸಿಕ್ಕಾಪಟ್ಟೆ ರಿಚ್ ಆಗಿ ಮೂಡಿಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು ಟ್ರೈಲರ್ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ನಿಭಾಯಿಸಿರುವ ರಾವಣನ ಪಾತ್ರ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಆದರೆ ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ರಾವಣನ ಲುಕ್ ರಿವೀಲ್ ಮಾಡಿಲ್ಲ. ಸೀತೆಯನ್ನು ಅಪಹರಿಸಲು ಬಂದ ಒಂದು ದೃಶ್ಯದಲ್ಲಿ ಸೈಫ್‌ಅಲಿ ಖಾನ್ ಎಂಟ್ರಿ ಇದ್ದರೂ ಕೂಡಾ ರಾವಣನ ಅವತಾರ ಎಲ್ಲೂ ತೋರಿಸಿಲ್ಲ. ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಆದಿಪುರುಷ್ ಟ್ರೈಲರ್ ರಿಲೀಸ್ ಆಗಿದೆ. ಬಹು ನಿರೀಕ್ಷೆಯ ಸಿನಿಮಾ ಜೂನ್ 16ಕ್ಕೆ ರಿಲೀಸ್ ಆಗುತ್ತಿದೆ.