ಪಾಕ್ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ 199 ಭಾರತೀಯ ಮೀನುಗಾರರು
ಕರಾಚಿ: ಪಾಕಿಸ್ತಾನದ ಸಮುದ್ರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದ್ದ 199 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಪಾಕಿಸ್ತಾನ ನಿರ್ಧರಿಸಿದೆ.
ಕರಾಚಿಯ ಲಾಂಧಿ ಸೆರೆಮನೆಯಲ್ಲಿ 199 ಭಾರತೀಯ ಮೀನುಗಾರರನ್ನು ಇರಿಸಲಾಗಿದೆ. ಬಂಧಿತ ಮೀನುಗಾರರನ್ನು ಬಿಡುಗಡೆ ಮಾಡಿ ಶುಕ್ರವಾರ(ಮೇ 12)ರಂದು ವಾಘಾ ಗಡಿಯ ಮೂಲಕ ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: 50 ಅಡಿ ಎತ್ತರದ ಸೇತುವೆಯಿಂದ ಬಿದ್ದ ಬಸ್ – 15 ಮಂದಿ ಸಾವು, 20 ಕ್ಕೂ ಹೆಚ್ಚು ಜನರಿಗೆ ಗಾಯ
ಈ ನಡುವೆ ಬಿಡುಗಡೆಗೊಳ್ಳಬೇಕಿದ್ದ ಜುಲ್ಫಿಕರ್ ಎಂಬ ಮೀನುಗಾರರೊಬ್ಬರು ಅನಾರೋಗ್ಯದಿಂದ ಶನಿವಾರ ಕರಾಚಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬಿಡುಗಡೆಯಾಗುತ್ತಿರುವ ಭಾರತೀಯ ಮೀನುಗಾರರ ಜೊತೆ ಜುಲ್ಫಿಕರ್ ಅವರ ಮೃತದೇಹವನ್ನು ಸಹ ಭಾರತಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದು ವರದಿಯಾಗಿದೆ.
ಕರಾಚಿ ಜೈಲಿನಲ್ಲಿ ಇನ್ನೂ 654 ಭಾರತೀಯ ಮೀನುಗಾರರು ಶಿಕ್ಷೆ ಅನುಭವಿಸುತ್ತಿದ್ದಾರೆ. ಅಂದಾಜು 83 ಪಾಕಿಸ್ತಾನಿ ಮೀನುಗಾರರು ಭಾರತೀಯ ಜೈಲುಗಳಲ್ಲಿದ್ದಾರೆ. 654 ಭಾರತೀಯ ಮೀನುಗಾರರ ಪೈಕಿ 631 ಮಂದಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.