‘ಹೆಚ್ ಡಿಕೆಗೆ ಸಹಾಯ ಮಾಡಿ ಆಯ್ತು.. ರೆಸ್ಟ್ ಮಾಡಲಿ’ – ಸಿಎಂ ಆಗಲು ನನಗೊಂದು ಅವಕಾಶ ಕೊಡಿ ಎಂದ ಡಿಕೆಶಿ!
ಮತದಾನಕ್ಕೆ ಇನ್ನೊಂದೇ ದಿನ ಬಾಕಿ ಇರುವಾಗಲೂ ಕಾಂಗ್ರೆಸ್ ನಾಯಕರ ಸಿಎಂ ಜಪ ನಿಂತಿಲ್ಲ. ಕೊನೇ ದಿನದ ಬಹಿರಂಗ ಪ್ರಚಾರದ ವೇಳೆಯೂ ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರುವ ಆಸೆಯನ್ನ ಬಿಚ್ಚಿಟ್ಟಿದ್ದಾರೆ. ಕನಕಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಧಾನಸೌಧದಲ್ಲಿ ಕೂರುವ ಕನಸನ್ನ ಹೊರ ಹಾಕಿದ್ದಾರೆ. ಪರೋಕ್ಷವಾಗಿ ಸಮ್ಮಿಶ್ರ ಸರ್ಕಾರದ ಬಗ್ಗೆಯೂ ಮಾತನಾಡಿದ್ದಾರೆ.
ಇದನ್ನೂ ಓದಿ : ಶಿವಣ್ಣನ ಪ್ರಚಾರ ಟೀಕಿಸಿ ಬೆಪ್ಪಾದ ಪ್ರಶಾಂತ್ ಸಂಬರಗಿ – ಇದಪ್ಪಾ ದೊಡ್ಮನೆ ಫ್ಯಾನ್ಸ್ ಪವರ್ ಅಂದ್ರೆ!
ಕೊನೇ ದಿನದ ಪ್ರಚಾರದ ವೇಳೆ ಕಾಂಗ್ರೆಸ್ ಪರ ಮತಯಾಚನೆ ಮಾಡಿದ ಡಿಕೆಶಿ, ರಾಮನಗರದ ಜನ ಈಗಾಗಲೇ ಹೆಚ್.ಡಿ ದೇವೇಗೌಡರು, ಹೆಚ್.ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿಗೆ ಅವಕಾಶ ಮಾಡಿಕೊಟ್ಟಿದ್ದೀರಿ. ರಾಮನಗರದಲ್ಲಿ ಹೊರಗಡೆಯವ್ರಿಗೆ ಅವಕಾಶ ಕೊಟ್ಟಿದ್ದೇವೆ. ಆದರೆ ಈಗ ಕೆಂಪೇಗೌಡರ ಮಗನಾದ ನನಗೆ ಅವಕಾಶ ಕೊಡಿ. ಮುಖ್ಯಮಂತ್ರಿ ಆಗಲು ಮಾಜಿ ಸಿಎಂ ಕುಮಾರಸ್ವಾಮಿಗೆ ಸಹಾಯ ಮಾಡಿ ಆಗಿದೆ. ನಿಖಿಲ್ ಕುಮಾರಸ್ವಾಮಿಯನ್ನ ಎಂಪಿ ಮಾಡಲು ಯತ್ನಿಸಿದ್ದೆವು. ಆದರೆ ಅದು ಆಗಲಿಲ್ಲ. ಇನ್ಮುಂದೆ ಹೆಚ್ ಡಿ ಕುಮಾರಸ್ವಾಮಿ ರೆಸ್ಟ್ ತೆಗೆದುಕೊಳ್ಳಲಿ. ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಗೆ ಬಂದಿದ್ದಾರೆ. ಇವರೆಲ್ಲಾ ಡಿ.ಕೆ ಶಿವಕುಮಾರ್ ನನ್ನ ವಿಧಾನಸೌಧದಲ್ಲಿ ಕೂರಿಸಲು ಬಂದಿದ್ದಾರೆ ಎಂದು ಸಿಎಂ ಆಗುವ ಕನಸನ್ನ ಎಲ್ಲರ ಮುಂದೆ ಬಹಿರಂಗಪಡಿಸಿದ್ದಾರೆ.