ಮೈಸೂರು ದಸರಾದಲ್ಲಿ 15 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಆನೆ ಅಸ್ವಸ್ಥ

ಮೈಸೂರು ದಸರಾದಲ್ಲಿ 15 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಆನೆ ಅಸ್ವಸ್ಥ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ 15 ಬಾರಿ ಅಂಬಾರಿ ಹೊತ್ತಿದ್ದಎಂಬ ಹೆಗ್ಗಳಿಕೆ ಪಾತ್ರನಾಗಿದ್ದ ‘ಬಲರಾಮ’ ಆನೆ (67)  ತೀವ್ರ ಅಸ್ವಸ್ಥಗೊಂಡಿದ್ದು, ಕಳೆದ 7 ದಿನಗಳಿಂದ ಆಹಾರ ತ್ಯಜಿಸಿರುವುದಾಗಿ ತಿಳಿದುಬಂದಿದೆ.

ಕಳೆದ 7 ದಿನಗಳಿಂದ ಅಸ್ವಸ್ಥಗೊಂಡಿರುವ ಬಲರಾಮನಿಗೆ ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದಾರೆ. ಪಶುವೈದ್ಯರು ಹಾಗೂ ತಜ್ಞರ ತಂಡವು ಇದೀಗ ಆನೆಗೆ ಎಂಡೋಸ್ಕೋಪಿ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಆನೆಯ ಗಂಟಲಿನಲ್ಲಿ ಹುಣ್ಣಾಗಿರುವ ಕಾರಣ ಏನನ್ನೂ ನುಂಗಲು ಸಾಧ್ಯವಾಗದೆ, ಆಹಾರ ತ್ಯಜಿಸಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಚುನಾವಣಾ ಆಯೋಗದಿಂದ ವಿಶೇಷ ಸೌಲಭ್ಯ – ಮನೆ ಬಾಗಿಲಿಗೆ ಬರಲಿದೆ ಕ್ಯಾಬ್..!

ಕಳೆದ ಒಂದು ವಾರದಿಂದ ಆನೆ ಯಾವುದೇ ಆಹಾರ ಸೇವಿಸುತ್ತಿಲ್ಲ. ಹೀಗಾಗಿ ಆನೆ ನಿತ್ರಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಪಶುವೈದ್ಯರು ಆನೆಗೆ ದ್ರವ ಪದಾರ್ಥಗಳನ್ನು ಸೇವನೆಗೆ ನೀಡುವಂತೆ ಸಲಹೆ ನೀಡಿದ್ದಾರೆ. ಆನೆಯನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಳಿಯ ಭೀಮನಕಟ್ಟೆಯಲ್ಲಿರುವ ವಿಶೇಷ ಆನೆ ಆರೋಗ್ಯ ಶಿಬಿರದಲ್ಲಿರಿಸಿ ನಿರಂತರ ನಿಗಾವಹಿಸಲಾಗಿದೆ. ಮೈಸೂರಿನಲ್ಲಿರುವ ರಾಜಮನೆತನದ ಆನೆಯ ಎಂಡೋಸ್ಕೋಪಿಗೆ ತಗಲುವ ವೆಚ್ಚವನ್ನು ಭರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಹಾರ ತ್ಯಜಿಸಿದಾಕ್ಷಣ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗುವುದಿಲ್ಲ. ಪರೀಕ್ಷೆಗಳ ಮೂಲಕ ನಿಖರ ಕಾರಣಗಳನ್ನು ತಿಳಿದುಕೊಳ್ಳಬೇಕಿದೆ. ತಿನ್ನಲು ಹಾಗೂ ಕುಡಿಯುವಂತೆ ಮಾಡಲು ಎಲ್ಲಾ ರೀತಿಯ ವಿಧಾನಗಳನ್ನು ಅನುಸರಿಸಿ ಪ್ರಯತ್ನ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೈಕೆ ಹಾಗೂ ಆಹಾರವನ್ನು ಸೂಕ್ತ ರೀತಿಯಲ್ಲಿ ನೀಡಿ, ಪಾಲನೆ ಮಾಡುವುದರಿಂದ ಕಾಡುಗಳಿಗಿಂತಲೂ ಶಿಬಿರಗಳಲ್ಲಿ ಆನೆಗಳು ಹೆಚ್ಚು ಕಾಲ ಬದುಕುಳಿಯುತ್ತವೆ. ಶಿಬಿರಗಳಲ್ಲಿ ಆನೆಗಳು 90 ವರ್ಷಗಳವರೆಗೂ ಬದುಕುಳಿಯುತ್ತವೆ. ಬಲರಾಮ ಅತ್ಯಂತ ಹಳೆಯ ದಸರಾ ಆನೆ. 15 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊತ್ತಿದ್ದಾನೆ. ಇತ್ತೀಚೆಗಷ್ಟೇ ಅಭಿಮನ್ಯೂ ಅಂಬಾರಿಯನ್ನು ಹೊತ್ತಿದ್ದ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

suddiyaana