ತಾಯಿ ಹೊಟ್ಟೆಯಲ್ಲಿರುವಾಗಲೇ ಮಗುವಿಗೆ ಮೆದುಳಿನ ಶಸ್ತ್ರಚಿಕಿತ್ಸೆ- ವಿಶ್ವದಲ್ಲೇ ಮೊದಲ ಪ್ರಯತ್ನ ಯಶಸ್ವಿ
ತಾಯಿಯ ಗರ್ಭದಲ್ಲಿರುವಾಗಲೇ ಮಗುವಿನ ಮೆದುಳು ಶಸ್ತ್ರಚಿಕಿತ್ಸೆಯನ್ನು ಅಮೆರಿಕ ವೈದ್ಯರ ತಂಡವೊಂದು ನಡೆಸಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇದು ವಿಶ್ವದಲ್ಲೇ ಮೊದಲ ಬಾರಿಗೆ ನಡೆಸಿದ ಶಸ್ತ್ರಚಿಕಿತ್ಸೆಯಾಗಿದೆ.
ಇದನ್ನೂ ಓದಿ: ಎಲ್ಕೆಜಿ ಮಕ್ಕಳ ಶಾಲಾ ದಾಖಲಾತಿ ವಯೋಮಿತಿ ಬದಲಾವಣೆ – ಪೋಷಕರ ಕೆಂಗಣ್ಣಿಗೆ ಗುರಿಯಾದ ಶಿಕ್ಷಣ ಇಲಾಖೆ
ಅಮೆರಿಕದ ಮಹಿಳೆಯೊಬ್ಬರ ಗರ್ಭದಲ್ಲಿದ್ದ 7 ತಿಂಗಳ ಮಗು “ವೆನಸ್ ಆಫ್ ಗ್ಯಾಲೆನ್ ಮಾಲ್ಫಾರ್ಮೇಶನ್’ ಎಂಬ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗೆಂದರೆ, ಮೆದುಳಿನಿಂದ ಹೃದಯಕ್ಕೆ ರಕ್ತವನ್ನು ತಲುಪಿಸುವ ನರವೊಂದು ಸರಿಯಾಗಿ ಬೆಳವಣಿಗೆ ಹೊಂದಿರಲಿಲ್ಲ. ಇದರಿಂದ ಮಗುವಿನ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಅಲ್ಲದೇ, ಮಗು ಹುಟ್ಟಿದ ತಕ್ಷಣವೇ ಮೆದುಳಿನ ಸಮಸ್ಯೆಗೆ ಗುರಿಯಾಗುವ ಅಥವಾ ಹುಟ್ಟಿದ ಕೂಡಲೇ ಹೃದಯವೈಫಲ್ಯಕ್ಕೆ ತುತ್ತಾಗುವ ಸಾಧ್ಯತೆಗಳು ಹೇರಳವಾಗಿತ್ತು. ಈ ಹಿನ್ನೆಲೆ 34 ವಾರಗಳ ಗರ್ಭಾವಸ್ಥೆಯಲ್ಲಿರುವ ತಾಯಿಯ ಗರ್ಭದಲ್ಲಿರುವ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಅಲ್ಟ್ರಾಸೌಂಡ್ ಸಹಾಯದೊಂದಿಗೆ ಬ್ರಿಗಮ್ ವುಮೆನ್ಸ್ ಹಾಸ್ಪಿಟಲ್ ಹಾಗೂ ಬೋಸ್ಟನ್ ಚಿಲ್ಡ್ರನ್ಸ್ ಹಾಸ್ಪಿಟಲ್ನ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಮಗುವಿನ ಮೆದುಳಿನ ಸಮಸ್ಯೆ ಸರಿಪಡಿಸಲಾಗಿದೆ. ತಾಯಿ ಹಾಗೂ ಗರ್ಭದಲ್ಲಿರುವ ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.