ಛತ್ತೀಸ್‌ಗಢದಲ್ಲೂ ಬಜರಂಗದಳ ಬ್ಯಾನ್ ಆಗುತ್ತಾ? – ಸಿಎಂ ಭೂಪೇಶ್ ಹೇಳಿದ್ದೇನು?

ಛತ್ತೀಸ್‌ಗಢದಲ್ಲೂ ಬಜರಂಗದಳ ಬ್ಯಾನ್ ಆಗುತ್ತಾ? – ಸಿಎಂ ಭೂಪೇಶ್ ಹೇಳಿದ್ದೇನು?

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧ ಮಾಡುವುದಾಗಿ ಭರವಸೆ ನೀಡಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಹಾಗೂ ಹಿಂದೂ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ಬೆನ್ನಲ್ಲೇ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್ ಅವರು ರಾಜ್ಯದಲ್ಲಿ ಬಜರಂಗದಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ರಾಜ್ಯದಲ್ಲೂ ಸಂಘಟನೆಯನ್ನು ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿಎಂ ಭೂಪೇಶ್‌ ಬಘೇಲ್, ಎರಡೂ ರಾಜ್ಯಗಳಲ್ಲಿನ ಪರಿಸ್ಥಿತಿಗಳು ವಿಭಿನ್ನವಾಗಿರುವ ಕಾರಣ ಕರ್ನಾಟಕದಲ್ಲಿ ತೆಗೆದುಕೊಂಡ ನಿರ್ಧಾರಗಳು ಛತ್ತೀಸಗಢಕ್ಕೆ ಅನ್ವಯಿಸುವುದಿಲ್ಲ. ಬಜರಂಗಿಗಳು ಛತ್ತೀಸ್‌ಗಢದಲ್ಲಿ  ಕೆಲವು ಗೊಂದಲಗಳನ್ನು ಉಂಟುಮಾಡಿದ್ದರು. ಅವೆಲ್ಲವನ್ನು ನಾವು ಸರಿಪಡಿಸಿದ್ದೇವೆ. ಕರ್ನಾಟಕ ಕಾಂಗ್ರೆಸ್‌ನ ನಿರ್ಧಾರಗಳು ಛತ್ತೀಸ್‌ಗಢಕ್ಕೆ ಅನ್ವಯಿಸುವ ಅಗತ್ಯವಿಲ್ಲ. ಒಂದು ವೇಳೆ ಅಗತ್ಯವೆನಿಸಿದರೆ ಸಂಘಟನೆ ನಿಷೇಧ ಮಾಡುವ ಬಗ್ಗೆ ಆಲೋಚಿಸಿ ಕ್ರಮಕೈಗೊಳ್ಳುತ್ತೇವೆ. ನಮ್ಮ ನಾಯಕರು ಮತ್ತು ಪಕ್ಷದ ಪದಾಧಿಕಾರಿಗಳು ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಈ ಬಾರಿ ನನ್ನ ಬಿಟ್ಟು ಬೇರೆ ಯಾರೂ ಮುಖ್ಯಮಂತ್ರಿ ಆಗಲು ಸಾಧ್ಯವೇ ಇಲ್ಲ’ – ಹೆಚ್.ಡಿ ಕುಮಾರಸ್ವಾಮಿ

ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹೇಳಿಕೆಗೆ ಛತ್ತೀಸ್‌ಗಢ ರಾಜ್ಯದ ಬಜರಂಗದಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲು ರಾಮ ಜನ್ಮಭೂಮಿ. ನಂತರ ರಾಮಸೇತು ಪುರಾವೆ ಕೇಳಿದರು. ಈಗ ಅವರು ಬಜರಂಗದಳವನ್ನು ಪ್ರಶ್ನಿಸುತ್ತಿದ್ದಾರೆ. ಛತ್ತೀಸ್‌ಗಢದ ಜನರು ಇದನ್ನು ಸಹಿಸುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುತ್ತಾರೆ ಎಂದು ಹಿರಿಯ ಬಿಜೆಪಿ ನಾಯಕ ಬ್ರಿಜ್‌ಮೋಹನ್ ಅಗರ್ವಾಲ್ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ  ಕಾಂಗ್ರೆಸ್, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಜರಂಗದಳ ಸಂಘಟನೆಯನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಈ ಬೆನ್ನಲ್ಲೇ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆ ಆಕ್ರೋಶ ಹೊರಹಾಕುತ್ತಿವೆ. ರಾಜ್ಯ ಹಲವೆಡೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿವೆ. ಇದೇ ಹೊತ್ತಿನಲ್ಲಿ ಬಜರಂಗದಳ ಸಂಘಟನೆ ಬಗ್ಗೆ ಛತ್ತೀಸ್‌ಗಢ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ.

suddiyaana