ಯತ್ನಾಳ್, ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ – ಚುನಾವಣಾ ಆಯೋಗದಿಂದ ಶೋಕಾಸ್ ನೋಟಿಸ್ ಜಾರಿ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜಕೀಯ ನಾಯಕರ ಮಾತಿನ ಭರಾಟೆ ಜೋರಾಗಿದೆ. ಒಲೈಕೆ, ಚಪ್ಪಾಳೆ, ಮತ ಸೆಳೆಯಲು ನೀಡುತ್ತಿರುವ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸುತ್ತಿದೆ. ಇದೀಗ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆ ಇಬ್ಬರು ನಾಯಕರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನಾಲಾಯಕ್ ಮಗ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಗೆ ಹಾಗೂ ಸೋನಿಯಾ ಗಾಂಧಿ ವಿಷಕನ್ಯೆ ಎಂದು ಹೇಳಿ ವಿವಾದ ಸೃಷ್ಟಿಸಿದ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ಗೂ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಇದನ್ನೂ ಓದಿ: ‘ಬಜರಂಗಿ’ ಸಂಘರ್ಷ – ಕಾಂಗ್ರೆಸ್ ಪ್ರಣಾಳಿಕೆಯನ್ನು ವೇದಿಕೆಯಲ್ಲೇ ಸುಟ್ಟು ಹಾಕಿದ ಈಶ್ವರಪ್ಪ
ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ. ಮೇ 4 ರೊಳಗೆ ತಮ್ಮ ತಮ್ಮ ವಿವಾದಾತ್ಮಕ ಹೇಳಿಕೆ ಬಗ್ಗೆ ಇಬ್ಬರೂ ನಾಯಕರು ಉತ್ತರ ನೀಡಬೇಕು ಅಂತಾ ಹೇಳಿದೆ.
ಏನಿದು ವಿವಾದ?
ರಾಜ್ಯ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿ ಬಂಜಾರಾ ಸಮಾಜಕ್ಕೆ ಅನ್ಯಾಯ ಮಾಡಿತು. ದಿಲ್ಲಿಯಲ್ಲಿ ಕುಳಿತವ ‘ನಾಲಾಯಕ್ ಬೇಟಾ’ ಇದ್ದಾಗ ಇನ್ನೇನು ಆಗಲು ಸಾಧ್ಯ? ಎಂದು ಪ್ರಿಯಾಕ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ನೇರವಾಗಿಯೇ ಟೀಕಾ ಪ್ರಹಾರ ಮಾಡಿದ್ದರು ಈ ಹೇಳಿಕೆ ವಿವಾದದ ಕಿಡಿ ಹಚ್ಚಿತ್ತು. ಹೀಗಾಗಿ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೋದಿ ವಿಶ್ವ ನಾಯಕ. ಆ ನಾಯಕನನ್ನು ನಾಗರಹಾವಿಗೆ ಹೋಲಿಸುವುದು ಸರಿಯೇ? ಕಾಂಗ್ರೆಸ್ ನಾಯಕರು ಸೋನಿಯಾ ಮಾತಿಗೆ ಮಣಿದು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪ್ರಧಾನಿ ಮೋದಿ ವಿಷಸರ್ಪವಾದರೆ ಸೋನಿಯಾ ಗಾಂಧಿ ವಿಷಕನ್ಯೆಯೇ ಎಂದು ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ಅವರನ್ನು ʼಅರೆಹುಚ್ಚʼ ಎಂದು ಕರೆದಿದ್ದರು. ಈ ಹೇಳಿಕೆಗೆ ಯತ್ನಾಳ್ ವಿರುದ್ಧ ಶೋಕಾಸ್ ಜಾರಿ ಆಗಿದೆ.