ಭತ್ತದ ಗದ್ದೆಯಲ್ಲಿ ಸಿಲುಕಿದ ಮೋದಿ ಭದ್ರತಾ ಸಿಬ್ಬಂದಿಯ ಹೆಲಿಕಾಪ್ಟರ್..!
ರಾಯಚೂರು ಜಿಲ್ಲೆಯ ಸಿಂಧನೂರಿಗೆ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತಾ ಸಿಬ್ಬಂದಿಯ ಸೇನಾಪಡೆಯ ಹೆಲಿಕಾಪ್ಟರ್ ಭತ್ತದ ಗದ್ದೆಯಲ್ಲಿ ಸಿಲುಕಿಕೊಂಡಿದೆ. ಸಿಂಧನೂರಿನಲ್ಲಿ ಸಮಾವೇಶಕ್ಕೆ ಪ್ರಧಾನಮಂತ್ರಿ ಮೋದಿ ಹೆಲಿಕಾಪ್ಟರ್‌ನಲ್ಲಿ ಆಗಮಿಸುತ್ತಾರೆ ಅನ್ನೋ ಕಾರಣಕ್ಕೆ ಹೆಲಿಪ್ಯಾಡ್ ಸಿದ್ಧಪಡಿಸಲಾಗಿತ್ತು. ಆದರೆ, ಅವರ ಭದ್ರತಾ ಸಿಬ್ಬಂದಿಗೂ ಹೆಲಿಪ್ಯಾಡ್ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರಿಂದ ತರಾತುರಿಯಲ್ಲಿ ಭತ್ತದ ಗದ್ದೆಯಲ್ಲಿ ಮಣ್ಣನ್ನು ಹಾಕಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.
ಇದನ್ನೂ ಓದಿ: ಸಕ್ಕರೆನಗರಿಯಲ್ಲಿ ಪ್ರಿಯಾಂಕಾ, ರಮ್ಯಾ ಮೋಡಿ – ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಮತಬೇಟೆ
ಭಾರತೀಯ ಭದ್ರತಾ ಪಡೆಯ ಹೆಲಿಕಾಪ್ಟರ್ ಲ್ಯಾಂಡ್ ಆದ ತಕ್ಷಣ ಗದ್ದೆಯಲ್ಲಿ ಸಿಕ್ಕಿಕೊಂಡಿದೆ. ಸುಮಾರು 3 ಗಂಟೆಗಳಿಂದ ಹೆಲಿಕಾಪ್ಟರ್ ತೆರವು ಕಾರ್ಯಾಚರಣೆ ಮಾಡಲಾಗುತ್ತಿದ್ದರೂ ಸಫಲವಾಗಿಲ್ಲ. ಮಳೆಯಿಂದಾಗಿ ಹೆಲಿಪ್ಯಾಡ್ ಸಂಪೂರ್ಣ ಜಲಾವೃತವಾಗಿತ್ತು. ಅವಸರದಲ್ಲಿ ಹೆಲಿಪ್ಯಾಡ್ ಪುನಃ ಸಿದ್ಧಗೊಳಿಸಲಾಗಿದ್ದು, ಇದರಲ್ಲಿ ಸೇನೆಯ ಹೆಲಿಕಾಪ್ಟರ್ ಕೆಸರಿನಲ್ಲಿ ಸಿಲುಕಿದ್ದು, ಅದನ್ನು ಮೇಲೆತ್ತಲು ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಜೆಸಿಬಿಯಿಂದ ಮೇಲೆತ್ತಲು ಕಾರ್ಯಾಚರಣೆ ನಡೆಸಿದರೂ ಕೂಡಾ ಸಾಧ್ಯವಾಗಿರಲಿಲ್ಲ. ಸುಮಾರು 50ಕ್ಕೂ ಹೆಚ್ಚು ಜನರಿಂದ ಹೆಲಿಕ್ಯಾಪ್ಟರ್ ಮೇಲೆಕ್ಕೆತ್ತುವ ಕಾರ್ಯ ನಡೆಯುತ್ತಿದೆ. ಸುಮಾರು ಮೂರ್ನಾಲ್ಕು ಗಂಟೆಗಳ ಸತತ ಪ್ರಯತ್ನ ಮಾಡಿದರೂ ಸೇನಾ ಹೆಲಿಕಾಪ್ಟರ್ ಅನ್ನು ಮೇಲೆತ್ತಲು ಸಾಧ್ಯವಾಗಿಲ್ಲ.
ಇನ್ನು ನರೇಂದ್ರ ಮೋದಿ ಅವರು ಕಾರ್ಯಕ್ರಮ ಮುಗಿಸಿ ಕಲಬುರಗಿಯತ್ತ ಹೊರಟರು. ಆದರೆ, ಭದ್ರತಾ ಸಿಬ್ಬಂದಿ ಕರೆದೊಯ್ಯುವ ಹೆಲಿಕಾಪ್ಟರ್ ಕೆಸರಿನ ಗದ್ದೆಯಲ್ಲಿ ಸಿಕ್ಕಿಕೊಂಡಿದ್ದರಿಂದ, ಅವರನ್ನು ಕರೆದೊಯ್ಯಲು ಬೇರೊಂದು ಹೆಲಿಕ್ಯಾಪ್ಟರ್ ಅನ್ನು ಸ್ಥಳಕ್ಕೆ ತರಿಸಲಾಯಿತು.