ಎನ್ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಕೆಲವು ದಿನಗಳಿಂದ ಮಹತ್ವದ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಕೆಲ ದಿನಗಳಿಂದ ಅಜಿತ್ ಪವಾರ್ ಅವರು ಎನ್ ಸಿಪಿ ತೊರೆದು ಬಿಜೆಪಿಗೆ ಸೇರುತ್ತಾರೆ. ಅವರ ಜೊತೆಗೆ ಅನೇಕ ಶಾಸಕರನ್ನು ಕರೆದೊಯ್ಯುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಎನ್ ಸಿಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಅಂತಾ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಘೋಷಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನ ಪ್ರಣಾಳಿಕೆ ಬಿಡುಗಡೆ – ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ಐ ನಿಷೇಧ
ರಾಜೀನಾಮೆ ನೀಡುತ್ತಿರುವ ಬಗ್ಗೆ ಪವಾರ್, ತಮ್ಮ ಆತ್ಮಚರಿತ್ರೆಯ ಎರಡನೇ ಆವೃತ್ತಿ ‘ಲೋಕ್ ಮಾಜೆ ಸಂಗಟಿ’ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ. ನಾನು ನನ್ನ ರಾಜಕೀಯ ಜೀವನವನ್ನು ಮೇ 1, 1960 ರಂದು ಪ್ರಾರಂಭಿಸಿದೆ. ಈ ಸುದೀರ್ಘ ರಾಜಕೀಯ ಜೀವನದ ನಂತರ ಅದನ್ನು ಎಲ್ಲೋ ನಿಲ್ಲಿಸುವ ಬಗ್ಗೆ ಯೋಚಿಸಬೇಕು. ವ್ಯಕ್ತಿಗೆ ದುರಾಸೆ ಇರಬಾರದು. ರಾಜ್ಯಸಭೆಯಲ್ಲಿ ನನಗೆ ಮೂರು ವರ್ಷಗಳ ಅಧಿಕಾರವಿದೆ. ನಾನು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.
ಮುಂದಿನ ಕ್ರಮವನ್ನು ನಿರ್ಧರಿಸಲು ಹಿರಿಯ ಎನ್ಸಿಪಿ ನಾಯಕರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಪವಾರ್ ಶಿಫಾರಸು ಮಾಡಿದ್ದಾರೆ. ಸಮಿತಿಯಲ್ಲಿ ಪ್ರಫುಲ್ ಪಟೇಲ್, ಸುನಿಲ್ ತಟ್ಕರೆ, ಪಿ ಸಿ ಚಾಕೋ, ನರಹರಿ ಜಿರ್ವಾಲ್, ಅಜಿತ್ ಪವಾರ್, ಸುಪ್ರಿಯಾ ಸುಳೆ, ಜಯಂತ್ ಪಾಟೀಲ್, ಛಗನ್ ಭುಜಬಲ್, ದಿಲೀಪ್ ವಾಲ್ಸೆ-ಪಾಟೀಲ್, ಅನಿಲ್ ದೇಶಮುಖ್, ರಾಜೇಶ್ ಟೋಪೆ, ಜಿತೇಂದ್ರ ಅವ್ಹಾದ್, ಹಸನ್ ಮುಶ್ರಿಫ್, ಧನಂಜಯ್ ಮುಂಡೆ, ಜಯದೇವ್ ಗಾಯಕ್ವಾಡ್ ಮತ್ತು ಪಕ್ಷದ ವಿವಿಧ ಘಟಕಗಳ ಮುಖ್ಯಸ್ಥರು ಇದ್ದಾರೆ ಎಂದು ಪವಾರ್ ಹೇಳಿದ್ದಾರೆ.
ಇನ್ನು 15 ದಿನಗಳಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ 2 ಪ್ರಮುಖ ಅಚ್ಚರಿಗಳು ನಡೆಯಲಿವೆ ಎಂದು ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಏಪ್ರಿಲ್ ತಿಂಗಳಲ್ಲಿ ಹೇಳಿಕೆ ನೀಡಿದ್ರು. ಅವರು ಆ ರೀತಿ ಹೇಳಿದ ಕೆಲ ದಿನಗಳಲ್ಲೇ ಶರದ್ ಪವಾರ್ ಎನ್ಸಿಪಿ ಮುಖ್ಯಸ್ಥ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇದರಿಂದ ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೇನು ಬೆಳವಣಿಗೆಳು ನಡೆಯಲಿವೆ ಎಂಬುದು ಕುತೂಹಲ ಕೆರಳಿಸಿದೆ.