ಮೋದಿ ಮೇಲೆ ಮೊಬೈಲ್ ಎಸೆದ ಪ್ರಕರಣ – ಇದು ಅಭಿಮಾನಿಯ ಎಡವಟ್ಟು ಅಷ್ಟೇ..!
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋನಲ್ಲಿ ಹೂ ಎಸೆಯುವ ಭರದಲ್ಲಿ ಮೊಬೈಲ್ ಎಸೆದಿರೋ ಘಟನೆ ಬಗ್ಗೆ ಅಪ್ಡೇಟ್ಸ್ ಸಿಕ್ತಿದೆ. ಅಪಾರವಾದ ಬಿಗಿಭದ್ರತೆಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರ ಕಡೆಗೆ ಮೊಬೈಲ್ ಎಸೆದಿದ್ದು ಎಲ್ಲರನ್ನೂ ಚಕಿತಗೊಳಿಸಿತ್ತು. ಚಿಕ್ಕಗಡಿಯಾರ ಬಳಿ ಕಾರ್ಯಕರ್ತರು ಹೂವನ್ನು ಎರಚುವ ಭರದಲ್ಲಿ ಮೋದಿ ರಥದ ಮೇಲೆ ಮೊಬೈಲ್ ಕೂಡಾ ಎಸೆದಿದ್ದರು. ಆದರೆ, ಇದು ಬೇಕಂತಾನೇ ಮೊಬೈಲ್ ಎಸೆದಿದ್ದು ಅಲ್ಲ, ಹೂ ಎಸೆಯುವ ಭರದಲ್ಲಿ ಬಿಜೆಪಿ ಬೆಂಬಲಿಗರು ಮೊಬೈಲ್ ಕೂಡಾ ಎಸೆದಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಬಿಜೆಪಿಯ ‘ಪ್ರಜಾ ಪ್ರಣಾಳಿಕೆ’ ಬಿಡುಗಡೆ – ಹಬ್ಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್, ಪ್ರತಿದಿನ ಅರ್ಧ ಲೀ. ಹಾಲು
ಪೊಲೀಸರ ಪ್ರಕಾರ ಇದು ಭದ್ರತಾ ಲೋಪವಲ್ಲ. ಮೋದಿಯವರ ರೋಡ್ ಶೋ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಹೂವು ಎಸೆಯುವ ಭರದಲ್ಲಿ ತಮ್ಮ ಮೊಬೈಲ್ನ್ನೇ ಮೋದಿಯವರ ಕಡೆಗೆ ತೂರಿದ್ದರು ಎಂದು ಹೇಳಲಾಗಿದೆ. ಮೊಬೈಲ್ ಬಂದು ತಾವಿದ್ದ ವಾಹನದ ಬಾನೆಟ್ ಮೇಲೆ ಬಿದ್ದಿದ್ದು ಮೋದಿಯವರ ಗಮನಕ್ಕೂ ಬಂದಿದೆ. ಕೂಡಲೇ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಕರೆದ ಮೋದಿಯವರು ಮೊಬೈಲ್ ಮಾಲೀಕರಿಗೆ ಆ ಮೊಬೈಲನ್ನು ಹಿಂದಿರುಗಿಸುವಂತೆ ಸೂಚಿಸಿದ್ದಾರೆ. ಹೂವಿನ ಜೊತೆ ತೂರಿ ಬಂದ ಮೊಬೈಲ್ ಅನ್ನು ಸ್ಥಳದಲ್ಲಿಯೇ ಇದ್ದ ಪೊಲೀಸರಿಗೆ ಭದ್ರತಾ ಸಿಬ್ಬಂದಿ ನೀಡಿದ್ದಾರೆ. ಆ ಬಳಿಕ ವಾರಸುದಾರರನ್ನು ಪತ್ತೆ ಮಾಡಿದ ಪೊಲೀಸರು, ಅವರಿಗೆ ಮೊಬೈಲ್ ಹಿಂದಿರುಗಿಸಿದ್ದಾರೆ. ಆದರೆ, ಇಷ್ಟಕ್ಕೇ ಈ ಘಟನೆಯನ್ನು ಸುಮ್ಮನೇ ಬಿಟ್ಟಿಲ್ಲ ಎನ್ನಲಾಗಿದೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತಂತೆ ಹೆಚ್ಚಿನ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.