ಬ್ಯಾಲೆಟ್ ಪೇಪರ್ ಮತದಾನ ಪ್ರಕ್ರಿಯೆ ಆರಂಭ – ಮನೆಯಿಂದಲೇ ವೋಟ್ ಹಾಕಿದ ಹಿರಿಯ ನಟಿ ಲೀಲಾವತಿ
ಬೆಂಗಳೂರು: ಇಂದಿನಿಂದ ಬ್ಯಾಲೆಟ್ ಪೇಪರ್ ವೋಟಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಹಿರಿಯ ನಟಿ ಲೀಲಾವತಿ ಅವರು ಮನೆಯಿಂದಲೇ ಮತದಾನ ಮಾಡಿದ್ದಾರೆ. ಈ ಮೂಲಕ ಮನೆಯಿಂದಲೇ ಮತದಾನ ಮಾಡಿದ ಮೊದಲ ಪ್ರಜೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಮೇ ತಿಂಗಳಲ್ಲಿ ಮತ್ತಷ್ಟು ಹೆಚ್ಚಾಗುತ್ತಾ ತಾಪಮಾನ? – ಹವಾಮಾನ ಇಲಾಖೆ ಹೇಳಿದ್ದೇನು?
ಎಂಬತ್ತು ವರ್ಷ ತುಂಬಿದ ನಾಗರಿಕರಿಗೆ, ಅಂಗವಿಕಲರು, ಪತ್ರಕರ್ತರಿಗೆ ಬ್ಯಾಲೆಟ್ ಪೇಪರ್ ಮೂಲಕ ಇಂದಿನಿಂದ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಇದರ ಅಡಿಯಲ್ಲಿ ಹಿರಿಯ ನಟಿ ಲೀಲಾವತಿ ಅವರು, ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಮನೆಯಲ್ಲಿ ಮತದಾನ ಮಾಡಿದ್ದಾರೆ. ಮಗ ವಿನೋದ್ ರಾಜ್ ಸಹಾಯದಿಂದ ಲೀಲಾವತಿಯವರು ಮನೆಯಲ್ಲಿ ಮತದಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಲೀಲಾವತಿ ಅವರು, ‘ಚುನಾವಣಾ ಆಯೋಗ ಈ ಅವಕಾಶ ಕಲ್ಪಿಸಿದ್ದು ನನ್ನಂತಹ ಹಿರಿಯರಿಗೆ ಅನುಕೂಲವಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಎಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ಮತದಾನ ಮನೆಯಲ್ಲೇ ಮಾಡಿದ್ದು ಸಂಭ್ರಮ ತಂದಿದೆ ಎಂದು ಹೇಳಿದ್ದಾರೆ.