ಮೇ ತಿಂಗಳಲ್ಲಿ ಮತ್ತಷ್ಟು ಹೆಚ್ಚಾಗುತ್ತಾ ತಾಪಮಾನ? – ಹವಾಮಾನ ಇಲಾಖೆ ಹೇಳಿದ್ದೇನು?

ಮೇ ತಿಂಗಳಲ್ಲಿ ಮತ್ತಷ್ಟು ಹೆಚ್ಚಾಗುತ್ತಾ ತಾಪಮಾನ? – ಹವಾಮಾನ ಇಲಾಖೆ ಹೇಳಿದ್ದೇನು?

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಆದರೂ ಕೂಡ ಬಿಸಿಲಿನ ಝಳ ಮಾತ್ರ ಕಡಿಮೆಯಾಗುತ್ತಿಲ್ಲ. ಜನರು ಬಿಸಿಲಿನ ತಾಪಕ್ಕೆ ಮತ್ತಷ್ಟು ತತ್ತರಿಸಿ ಹೋಗುತ್ತಿದ್ದಾರೆ. ಇದರ ನಡುವೆ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮೊದಲ ಶಾಖ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಜನರು ಮತ್ತಷ್ಟು ಆತಂತ ಪಡುವಂತಾಗಿದೆ.

ಐಎಂಡಿ ಬಿಡುಗಡೆ ಮಾಡಿರುವ ಸೂಚ್ಯಾಂಕದ ಪ್ರಕಾರ, ಮೇ ತಿಂಗಳಿನಲ್ಲಿ  ದೇಶದ ದಕ್ಷಿಣ ಪ್ರದೇಶದಲ್ಲಿ 46-55 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಅಂತಾ ಹೇಳಲಾಗಿದೆ. ಆದರೂ ಈ ಸೂಚ್ಯಂಕ ಅಮೆರಿಕ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ ಸೂತ್ರವನ್ನು ಆಧರಿಸಿದೆ. ಭಾರತದ ಮೇಲಿನ ತಾಪಮಾನವನ್ನು ಮೌಲ್ಯೀಕರಿಸಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ – 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಶಾಖ ಸೂಚ್ಯಂಕವು ಸಾಪೇಕ್ಷ ಆರ್ದ್ರತೆ ಮತ್ತು ಗಾಳಿಯ ಉಷ್ಣತೆಯೊಂದಿಗೆ ಸಂಯೋಜಿಸಿದಾಗ ಮಾನವ ದೇಹ ಅನುಭವಿಸುವ ತಾಪಮಾನವನ್ನು ಅಳೆಯುವ ಸೂಚ್ಯಂಕವಾಗಿದೆ. “ಈ ಸೂಚ್ಯಂಕವು ಅಮೆರಿಕ ಹವಾಮಾನ ಸಂಸ್ಥೆಯ ಸಾಗರ ಮತ್ತು ವಾಯುಮಂಡಲದ ಆಡಳಿತ ಸೂತ್ರವನ್ನು ಆಧರಿಸಿದೆ. ಇದು ಭಾರತದ ಮೇಲಿನ ತಾಪಮಾನವನ್ನು ಮೌಲ್ಯೀಕರಿಸಿಲ್ಲ. ನಾವು ಅದನ್ನು ಪರಿಮಾಣದ ಬದಲಿಗೆ ಗುಣಾತ್ಮಕವಾಗಿ(ನಿರ್ದಿಷ್ಟ ಸ್ಥಳ) ಓದಬೇಕು ಮತ್ತು ಜನ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು” ಎಂದು ಐಎಂಡಿ ಡೈರೆಕ್ಟರ್ ಜನರಲ್ ಮೃತ್ಯುಂಜಯ್ ಮೊಹಾಪಾತ್ರ ಅವರು ಹೇಳಿದ್ದಾರೆ.

ಬಿಹಾರ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಪೂರ್ವ ಭಾರತದ ಕೆಲವು ಭಾಗಗಳು ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಎದುರಿಸುವ ಸಾಧ್ಯತೆಯಿದೆ ಮತ್ತು ಕೆಲವು ದಿನಗಳಲ್ಲಿ ಉಷ್ಣಹವೆ  ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

suddiyaana