ಫ್ರೆಂಚ್ ಫ್ರೈಸ್ ತಿಂತೀರಾ? – ಖಿನ್ನತೆಗೆ ಒಳಗಾಗುತ್ತೀರಾ ಎಚ್ಚರ!
ಮಕ್ಕಳಿಂದ ಹಿರಿಯರವರೆಗೂ ಫ್ರೆಂಚ್ ಫ್ರೈಸ್ ಫೆವರೆಟ್ ಚಾಟ್ಸ್ ಆಗಿದೆ. ಯಾವುದಾರೂ ಫಾಸ್ಟ್ ಫುಡ್ ಶಾಪ್ ಗಳಿಗೆ ಹೋದಾಗ ಅನೇಕರು ಅದನ್ನೇ ಮೊದಲು ಆರ್ಡರ್ ಮಾಡುತ್ತಾರೆ. ಆದ್ರೆ ಅತಿಯಾದ್ರೆ ಅಮೃತವೂ ವಿಷ ಅಂತಾರಲ್ಲ. ಹಾಗೇ ಜಾಸ್ತಿ ಫ್ರೆಂಚ್ ಫ್ರೈಸ್ ತಿಂದ್ರೆ ನಿಮ್ಮ ಜೀವಕ್ಕೆ ಅಪಾಯ ಎದುರಾಗಬಹುದು ಅಂತಾ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.
ಚೀನಾದ ಹ್ಯಾಂಗ್‌ಝೌ ಸಂಶೋಧಕರ ತಂಡವೊಂದು ಫ್ರೆಂಚ್ ಫ್ರೈಸ್ ಮೇಲೆ ಅಧ್ಯಯನ ನಡೆಸಿದೆ. ಹುರಿದ ಆಲೂಗಡ್ಡೆಗಳ ಪದಾರ್ಥಗಳನ್ನು ಪದೇ ಪದೆ ಸೇವಿಸುತ್ತಿರುವವರು ಭಯ, ಖಿನ್ನತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಶೇಕಡಾ 7 ರಿಂದ 12 ರಷ್ಟು ಪಟ್ಟು ಆತಂಕ, ಖಿನ್ನತೆ ಹೆಚ್ಚಾಗುತ್ತದೆ. ಖಿನ್ನತೆ, ಭಯದಂತಹ ಸಮಸ್ಯೆಗಳನ್ನು ಯುವಕರೇ ಎದುರಿಸುತ್ತಿದ್ದಾರೆ ಅನ್ನೋ ವಿಚಾರ ಬಹಿರಂಗವಾಗಿದೆ.
ಇದನ್ನೂ ಓದಿ: ಒಂದೇ ತಿಂಗಳಲ್ಲಿ 2 ಚೀತಾಗಳು ಸಾವು – ಕೂನೋ ಉದ್ಯಾನವನದಿಂದ ಬೇರೆಡೆಗೆ ಶಿಫ್ಟ್ ಮಾಡ್ತಾರಾ?
ಕರಿದ ಆಹಾರದ ಸೇವನೆಯು ಅಧಿಕ ರಕ್ತದೊತ್ತಡ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್ ಮತ್ತು ಇತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಕರಿದ ಆಹಾರದ ನಡುವೆ ಪ್ರಾಥಮಿಕ ಸಂಬಂಧವಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಈ ಅಧ್ಯಯನವನ್ನು 11 ವರ್ಷಗಳ ಕಾಲ ನಡೆಸಲಾಗಿದೆ. ಈ ಅವಧಿಯಲ್ಲಿ 140,728 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಮೊದಲ ಎರಡು ವರ್ಷಗಳಲ್ಲಿ ಖಿನ್ನತೆಗೆ ಒಳಗಾದ ಜನರನ್ನು ಹೊರತುಪಡಿಸಿದ ನಂತರ, ಹುರಿದ ಆಹಾರ, ಅದರಲ್ಲೂ ಹುರಿದ ಆಲೂಗಡ್ಡೆಗಳನ್ನು ಸೇವಿಸುವ ಜನರಲ್ಲಿ 8294 ಆತಂಕ ಮತ್ತು 12735 ಖಿನ್ನತೆಯ ಪ್ರಕರಣಗಳನ್ನು ಗುರುತಿಸಲಾಗಿದೆ. ಹುರಿದ ಆಲೂಗಡ್ಡೆ ಸೇವನೆಯು ನಿರ್ದಿಷ್ಟವಾಗಿ ಖಿನ್ನತೆಯ ಅಪಾಯವನ್ನು ಶೇಕಡಾ 2 ರಷ್ಟು ಹೆಚ್ಚಿಸಿದೆ. ಇದು ಯುವಕರಲ್ಲಿ ಹೆಚ್ಚಾಗಿ ಕಂಡು ಬಂದಿದೆ ಎಂದು ತಜ್ಞರು ಹೇಳಿದ್ದಾರೆ.
ಆತಂಕ ಮತ್ತು ಖಿನ್ನತೆಯಿರುವ ಜನರು ಸಾಮಾನ್ಯವಾಗಿ ತಮ್ಮ ಮನಸ್ಥಿತಿಯನ್ನು ಸುಧಾರಿಸಲು ತಾವೇ ಕೆಲವೊಂದು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವರು ತಮ್ಮ ಮನಸ್ಥಿತಿ ಸುಧಾರಿಸಬೇಕೆಂದು ಹೆಚ್ಚು ಹೆಚ್ಚು ಆಹಾರ ಸೇವಿಸುತ್ತಾರೆ. ಇದರಿಂದಾಗಿ ಮಾನಸಿಕ ಆರೋಗ್ಯದೊಂದಿಗೆ ದೇಹ ಆರೋಗ್ಯವು ಹದಗೆಡುತ್ತದೆ. ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ಅಷ್ಟೇ ಅಲ್ಲದೇ ಮಧುಮೇಹ, ಸ್ಥೂಲಕಾಯತೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ.