ಒಂದೇ ತಿಂಗಳಲ್ಲಿ 2 ಚೀತಾಗಳು ಸಾವು – ಕೂನೋ ಉದ್ಯಾನವನದಿಂದ ಬೇರೆಡೆಗೆ ಶಿಫ್ಟ್ ಮಾಡ್ತಾರಾ?
ಮಧ್ಯಪ್ರದೇಶ : ಕಳೆದ ವರ್ಷ ನಮೀಬಿಯಾದಿಂದ ಭಾರತಕ್ಕೆ ಕರೆತಂದ ಚೀತಾಗಳ ಪೈಕಿ ಕೇವಲ ಒಂದು ತಿಂಗಳ ಅವಧಿಯಲ್ಲಿ 2 ಚೀತಾಗಳು ಸಾವನ್ನಪ್ಪಿವೆ. ಈ ಬೆನ್ನಲ್ಲೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಿಂದ ಚೀತಾಗಳನ್ನು ಬೇರೆಡೆಗೆ ವರ್ಗಾಯಿಸುವಂತೆ ಮಧ್ಯಪ್ರದೇಶದ ಅರಣ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಇದನ್ನೂ ಓದಿ: ಸಾಶಾ ಸಾವಿನ ಬೆನ್ನಲ್ಲೇ ಕುನೋ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ಚೀತಾ
ಕುನೋ ಉದ್ಯಾನದಲ್ಲಿ ಚೀತಾಗಳಿಗೆ ಅಗತ್ಯವಾಗಿರುವ ಸೌಲಭ್ಯಗಳು ಇಲ್ಲ. ಚೀತಾಗಳ ಮೇಲೆ ನಿಗಾ ವಹಿಸಲು ಇಲ್ಲಿ ಸಿಬ್ಬಂದಿ ಕೊರತೆ ಇದೆ. ಚೀತಾಗಳಿಗೆ ಓಡಾಡಲು ಬೇಕಾದಷ್ಟು ಜಾಗವೂ ಇಲ್ಲ. ಕೆಲ ಚೀತಾಗಳು ಕುನೋ ಅರಣ್ಯದಲ್ಲಿ ಜಾಗ ಸಾಲದೆ ಪದೇಪದೇ ಬೇರೆ ಅರಣ್ಯಕ್ಕೆ ಹೋಗುತ್ತಿವೆ. ಒಂದು ಚೀತಾಕ್ಕೆ ಸಂಚರಿಸಲು ಸರಾಸರಿ 100 ಚ.ಕಿ.ಮೀ. ಅರಣ್ಯ ಬೇಕಾಗುತ್ತದೆ. ಅಷ್ಟೇ ಅಲ್ಲದೇ ಒಂದು ಚೀತಾವನ್ನು ನೋಡಿಕೊಳ್ಳಲು 9 ಜನರು ಬೇಕು. ಅಷ್ಟು ಸಿಬ್ಬಂದಿ ನಮ್ಮಲ್ಲಿಲ್ಲ. ಹೀಗಾಗಿ ಚೀತಾಗಳನ್ನು ಸ್ಥಳಾಂತರಿಸಬೇಕು ಎಂದು ಅವುಗಳ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರಕ್ಕೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಕುನೋ ರಾಷ್ಟ್ರೀಯ ಉದ್ಯಾನವನ 748 ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು,ಈ ಪಾರ್ಕ್‌ನಲ್ಲಿ ಆಫ್ರಿಕಾದ ಚಿರತೆಗಳನ್ನು ಬಿಡುವುದೆಂದು ಪ್ಲಾನ್ ಮಾಡಿದ್ದಾಗಲೇ ಅವುಗಳಿಗೆ ಇಷ್ಟು ಜಾಗ ಸಾಲದು, ಮತ್ತು ಭಾರತದ ನೆಲಕ್ಕೆ ಚೀತಾಗಳು ಹೊಂದಿಕೊಳ್ಳದು ಎಂದು ವನ್ಯಜೀವಿ ತಜ್ಞರು ಎಚ್ಚರಿಸಿದ್ದರು. ಕುನೋ ಉದ್ಯಾನವನದ ವಾತಾವರಣಕ್ಕೆ ಚೀತಾಗಳು ಹೊಂದಿಕೊಳ್ಳದಿದ್ದರೆ ಅವುಗಳನ್ನು ರಾಜಸ್ಥಾನದ ಮುಕುಂದರಾ ಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಮಾಡಲಾಗಿತ್ತು ಎಂದು ಅಧಿಕಾರಿಗಳು ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ವರ್ಷ ನಮೀಬಿಯಾದಿಂದ 8 ಮತ್ತು ದ.ಆಫ್ರಿಕಾದಿಂದ 12 ಚೀತಾಗಳನ್ನು ‘ಪ್ರಾಜೆಕ್ಟ್ ಚೀತಾ’ ಅಡಿಯಲ್ಲಿ ಭಾರತಕ್ಕೆ ಕರೆತರಲಾಗಿತ್ತು. ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ (ಸೆ.17) ದಿನದಂದು ಮೊದಲ ತಂಡದಲ್ಲಿ ಚೀತಾಗಳು ಭಾರತಕ್ಕೆ ಬಂದಿದ್ದವು. ಮೊದಲ ಹಂತದಲ್ಲಿ ನಮೀಬಿಯಾದಿಂದ ತಂದಿದ್ದ 8 ಚೀತಾಗಳನ್ನು ಈಗಾಗಲೇ ಮುಕ್ತ ಕಾಡಿಗೆ ಬಿಡಲಾಗಿದೆ. ಎರಡನೇ ಹಂತದಲ್ಲಿ ದಕ್ಷಿಣ ಆಫ್ರಿಕಾದಿಂದ ತಂದ 12 ಚೀತಾಗಳನ್ನು ಇನ್ನೂ ಪೂರ್ಣ ಪ್ರಮಾಣದ ಕಾಡಿಗೆ ಬಿಟ್ಟಿಲ್ಲ.