ಸಿದ್ದಗಂಗಾ ಮಠದ ಉತ್ತರಾಧಿಕಾರಿ ಆಯ್ಕೆ – ಶಿವಕುಮಾರ ಶ್ರೀಗಳ ಶಿಷ್ಯನಿಗೆ ಪಟ್ಟಾಧಿಕಾರ

ಸಿದ್ದಗಂಗಾ ಮಠದ ಉತ್ತರಾಧಿಕಾರಿ ಆಯ್ಕೆ – ಶಿವಕುಮಾರ ಶ್ರೀಗಳ ಶಿಷ್ಯನಿಗೆ ಪಟ್ಟಾಧಿಕಾರ

ತ್ರಿವಿಧ ದಾಸೋಹಿ ಮಠವೆಂದೇ ಪ್ರಸಿದ್ಧಿ ಪಡೆದಿರುವ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ.  ನಡೆದಾಡುವ ದೇವರು ಶಿವಕುಮಾರ ಶ್ರೀಗಳ ಶಿಷ್ಯ ಮನೋಜ್‌ ಕುಮಾರ್‌ ಅವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ ಮನೋಜ್‌ ಕುಮಾರ್‌ ಪಟ್ಟಾಧಿಕಾರ ಏಪ್ರಿಲ್ 23ರಂದು ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: ಸಿದ್ಧಗಂಗಾ ಶ್ರೀಗಳ ನಾಲ್ಕನೇ ವರ್ಷದ ಪುಣ್ಯಸ್ಮರಣೆ – ಲಕ್ಷಾಂತರ ಭಕ್ತರಿಗೆ ಭರ್ಜರಿ ಭೋಜನ!

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಗ್ರಾಮದ ಎಂ.ಬಿ. ಷಡಕ್ಷರಯ್ಯ- ವಿರುಪಾಕ್ಷಮ್ಮ ದಂಪತಿಯ ಪುತ್ರರಾದ ಮನೋಜ್‌ ಕುಮಾರ್‌ ಅವರು ಈಗ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಆಗಿ ಆಯ್ಕೆ ಆಗಿದ್ದಾರೆ. ಇವರು 1987ರ ಜೂ.2ರಂದು ಜನಿಸಿದ್ದು, ಬಿಎಸ್‌ಸಿ, ಬಿಎಡ್‌ ಹಾಗೂ ಎಂಎ ಪದವಿಯನ್ನು ಪಡೆದಿದ್ದಾರೆ. ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇ 23ರ ಬಸವ ಜಯಂತಿಯಂದು ನಿರಂಜನ ಪಟ್ಟಾಧಿಕಾರ ನೆರವೇರಲಿದೆ. ಸಿದ್ದಗಂಗಾ ಮಠದ ಜೊತೆಗೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠಕ್ಕೆ K.M.ಹರ್ಷ ಎನ್ನುವವರು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. K.M.ಹರ್ಷ ಅವರು ತುಮಕೂರು ತಾಲೂಕಿನ ಕಾಳೇನಹಳ್ಳಿ ನಿವಾಸಿಯಾಗಿದ್ದಾರೆ. ದೇವನಹಳ್ಳಿಯ ಬಸವಕಲ್ಯಾಣ ಮಠಕ್ಕೆ ಮಂಡ್ಯ ಜಿಲ್ಲೆಯ ಬಿಳುಗಲಿ ನಿವಾಸಿ ಗೌರೀಶ್ ಕುಮಾರ್ ನೇಮಕ ಮಾಡಲಾಗಿದೆ. ತ್ರಿವಿಧ ದಾಸೋಹಿ ಮಠ ಎಂದು ವಿಶ್ವಖ್ಯಾತಿ ಪಡೆದಿರುವ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಉತ್ತರಾಧಿಕಾರಿಯಾಗಿ ಸಿದ್ಧಲಿಂಗ ಸ್ವಾಮೀಜಿ ಆಡಳಿತ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಈಗ ನಡೆದಿದೆ.

suddiyaana