ಹೆಚ್ಚಾಗುತ್ತಿದೆ ಸೈಬರ್ ವಂಚನೆ – ಉದ್ಯೋಗ ಹುಡುಕುತ್ತಿರುವವರೇ ಟಾರ್ಗೆಟ್!
ಬೆಂಗಳೂರು: ಇದು ಡಿಜಿಟಲ್ ಯುಗ. ಇಲ್ಲಿ ಜನರಿಗೆ ಎಲ್ಲಾ ವಿಚಾರಗಳು ಆನ್ ಲೈನ್ ಮೂಲಕವೇ ಸಿಗುತ್ತವೆ. ಉದ್ಯೋಗದ ಹುಡುಕಾಟದಲ್ಲಿರುವವರಿಗೂ ಸಾಕಷ್ಟು ಆ್ಯಪ್ ಗಳು ತಲೆ ಎತ್ತಿ ನಿಂತಿವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಉದ್ಯೋಗ ಹುಡುಕುತ್ತಿರುವವರನ್ನು ಟಾರ್ಗೆಟ್ ಮಾಡಿ ಅವರಿಂದ ಲಕ್ಷ ಲಕ್ಷ ಹಣ ದೋಚುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ ಅನ್ನೋ ಆತಂಕಕಾರಿ ಮಾಹಿತಿಯೊಂದು ಬಯಲಾಗಿದೆ.
ಇದನ್ನೂ ಓದಿ: ಸ್ನೇಹಕ್ಕೂ ಸೈ.. ಸಂಬಂಧಕ್ಕೂ ಸೈ – ದೇಶದಲ್ಲಿ ಸಂತೋಷವಾಗಿರುವ ರಾಜ್ಯಗಳಲ್ಲಿ ಮಿಜೋರಾಂ ನಂಬರ್ 1..!
ಉದ್ಯೋಗದ ಹುಡುಕಾಟದಲ್ಲಿರುವ ಯುವಕ-ಯುವತಿಯರನ್ನೇ ಸೈಬರ್ ವಂಚಕರು ಟಾರ್ಗೆಟ್ ಮಾಡುತ್ತಿದ್ದಾರೆ. ಆನ್ಲೈನ್ ನಲ್ಲಿ ಪಾರ್ಟ್ ಟೈಮ್, ಫುಲ್ ಟೈಂ ಜಾಬ್ ಕೊಡಿಸುವುದಾಗಿ ಹೇಳಿ ಮೋಸ ಮಾಡಲಾಗುತ್ತಿದೆ. ಕಳೆದ 3 ವರ್ಷದಲ್ಲಿ ದೇಶಾದ್ಯಂತ 76,255 ವಂಚನೆ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಬಹುತೇಕ ಉದ್ಯೋಗದ ಆಮಿಷಕ್ಕೊಳಗಾಗಿ ಮೋಸ ಹೋದ ಪ್ರಕರಣಗಳೇ ಹೆಚ್ಚಾಗಿದೆ. 2019ರಲ್ಲಿ ದೇಶದಲ್ಲಿ ಒಟ್ಟು 21,252 ಪ್ರಕರಣಗಳು ದಾಖಲಾಗಿದೆ. 2020ರಲ್ಲಿ 24,952 ಕೇಸ್ ಗಳು ದಾಖಲಾಗಿದ್ದು. 2021ರಲ್ಲಿ 30,051 ಕೇಸ್ಗಳು ವರದಿಯಾಗಿವೆ ಅಂತಾ ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ (ಎನ್ಸಿಆರ್ಬಿ) ಮಾಹಿತಿ ನೀಡಿದೆ.
ಇನ್ನು ಕರ್ನಾಟಕದಲ್ಲೂ ಸೈಬರ್ ವಂಚನೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಒಂದು ವರ್ಷಕ್ಕೆ 6 ಸಾವಿರಕ್ಕೂ ಹೆಚ್ಚು ವಂಚನೆ ಪ್ರಕರಣಗಳು ವರದಿಯಾಗುತ್ತಿವೆ ಅಂತಾ ಎನ್ಸಿಆರ್ಬಿ ಮಾಹಿತಿ ನೀಡಿದೆ. ಆನ್ಲೈನ್ನಲ್ಲಿ ಪಾರ್ಟ್ ಟೈಮ್ ಉದ್ಯೋಗದ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವ ದೂರುಗಳೇ ಹೆಚ್ಚಾಗಿ ವರದಿಯಾಗುತ್ತಿದೆ.
ವಂಚಕರು ನಕಲಿ ವೆಬ್ಸೈಟ್ ಸೃಷ್ಟಿಸಿ ಉದ್ಯೋಗ ಇರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡುತ್ತಿದೆ. ಅಷ್ಟೇ ಅಲ್ಲದೇ ಲಿಂಕ್ ಕ್ರಿಯೇಟ್ ಮಾಡಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸುತ್ತದೆ. ಈ ವೇಳೆ ಸಂದರ್ಶನದ ಶುಲ್ಕ ಅಭ್ಯರ್ಥಿಯಿಂದ ತಲಾ 5ರಿಂದ 50 ಸಾವಿರ ರೂ.ವರೆಗೆ ವಸೂಲಿ ಮಾಡುತ್ತಿವೆ. ಅಷ್ಟೇ ಅಲ್ಲದೇ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸಲಾಗುವುದು, ಸಿಬಿಐ, ಐಟಿ, ರೈಲ್ವೆ ಇಲಾಖೆಗಳಂತಹ ಸರ್ಕಾರಿ ಉದ್ಯೋಗ ಕೊಡಿಸಲಾಗುವುದು ಅಂತಾ ವಂಚನೆ ಮಾಡುತ್ತಿವೆ.