ಮಕ್ಕಳಿಗೆ ರಜೆ ಎಂದು ಪ್ರಚಾರಕ್ಕೆ ಕರೆಯಬೇಡಿ..! – ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾದ ಚುನಾವಣಾಧಿಕಾರಿಗಳು..!
ಈಗ ಹೇಗಿದ್ದರೂ ಬೇಸಿಗೆ ರಜೆ. ಮಕ್ಕಳು ಮನೆಯಲ್ಲಿ ಆರಾಮಾಗಿದ್ದಾರೆ. ಹಾಗಂತಾ ಚುನಾವಣಾ ಪ್ರಚಾರಕ್ಕೆ ಬನ್ನಿ ಅಂತಾ ಮಕ್ಕಳನ್ನು ಕರೆಯಬೇಡಿ. ಒಂದು ವೇಳೆ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಂಡರೆ, ಕ್ರಮ ಕೈಗೊಳ್ಳುವುದು ಗ್ಯಾರಂಟಿ. ಮಕ್ಕಳನ್ನು ಪ್ರಚಾರಕ್ಕೆ ಬಳಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ತುಮಕೂರು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಎಚ್ಚರಿಸಿದ್ದಾರೆ. 18 ವರ್ಷದೊಳಗಿನ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದ್ದು, ಹೀಗಾಗಿ ಯಾರೂ ಪ್ರಚಾರಕ್ಕೆ ಮಕ್ಕಳನ್ನು ಕರೆದೊಯ್ಯದಂತೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೊಮ್ಮಾಯಿಯನ್ನೇ ಸೋಲಿಸಿದ್ದ ಶೆಟ್ಟರ್.. ಸತತ 6 ಸಲ ಶಾಸಕ – ಜಗದೀಶ್ ಶೆಟ್ಟರ್ ಹಾದಿಯೇ ರೋಚಕ!
ತಹಸೀಲ್ದಾರರೇ ಮಕ್ಕಳ ರಕ್ಷಣಾ ಸಮಿತಿ ಹಾಗೂ ಬಾಲ ಕಾರ್ಮಿಕ ಯೋಜನೆಯ ಅಧ್ಯಕ್ಷರು ಆಗಿರುವುದರಿಂದ ತಮ್ಮ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಪಕ್ಷಗಳು 18 ವರ್ಷದ ಮಕ್ಕಳನ್ನು ಚುನಾವಣಾ ಪ್ರಚಾರ ಹಾಗೂ ಇನ್ನಿತರೆ ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ತಮ್ಮ ಕ್ಷೇತ್ರದ ಕಾರ್ಮಿಕ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ವೈ.ಎಸ್.ಪಾಟೀಲ್ ಸೂಚನೆ ನೀಡಿದ್ದಾರೆ. ಕಾರ್ಮಿಕ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನೊಳಗೊಂಡ ತಂಡ, ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ವಾರ್ಡ್ ಸದಸ್ಯರುಗಳಿಗೆ ಮಕ್ಕಳನ್ನು ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳದಂತೆ ಸೂಚಿಸುವುದು. ಜತೆಗೆ ನಾನಾ ರಾಜಕೀಯ ಪಕ್ಷಗಳು ಕೈಗೊಳ್ಳುವ ಪ್ರಚಾರ ಕಾರ್ಯ ಹಾಗೂ ಇನ್ನಿತರೆ ಚುನಾವಣಾ ಕಾರ್ಯಗಳನ್ನು ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಳ್ಳುವವರೆಗೆ ನಿಯಮಾನುಸಾರ ತಪಾಸಣೆಗಳನ್ನು ಕೈಗೊಳ್ಳುವುದು ಹಾಗೂ ಯಾವುದೇ ಪಕ್ಷದವರು ಕಾಯ್ದೆಯನ್ನು ಉಲ್ಲಂಘಿಘಿಸಿ ಮಕ್ಕಳನ್ನು ಬಳಸಿಕೊಂಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ.