ತಿರುಪತಿ ಬೆಟ್ಟ ಏರುತ್ತಿದ್ದಾಗ ಗಜಪಡೆ ದಿಢೀರ್ ಪ್ರತ್ಯಕ್ಷ – ದಾರಿ ಮಧ್ಯೆ ಆನೆಗಳನ್ನು ಕಂಡು ಬೆಚ್ಚಿಬಿದ್ದ ತಿಮ್ಮಪ್ಪನ ಭಕ್ತರು..!
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕೆಲವರು ತಮ್ಮ ತಮ್ಮ ವಾಹನದಲ್ಲಿ ಹೋದರೆ, ಇನ್ನು ಕೆಲವರಿಗೆ ಕಾಲ್ನಡಿಗೆಯಲ್ಲೇ ಹೋದರೆ ಇನ್ನೂ ಪುಣ್ಯಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ. ಹೀಗಾಗಿ ಅನೇಕ ತಿಮ್ಮಪ್ಪನ ಭಕ್ತರು ತಿರುಮಲ ಬೆಟ್ಟದಲ್ಲಿ ಕಾಲ್ನಡಿಗೆಯಲ್ಲಿ ಹೋಗುತ್ತಿರುತ್ತಾರೆ. ಇದೀಗ ತಿಮ್ಮಪ್ಪನ ದರ್ಶನಕ್ಕೆ ಬೆಟ್ಟದಲ್ಲಿ ನಡೆದುಕೊಂಡು ಬರುವಾಗ ಭಕ್ತರಿಗೆ ಆನೆಗಳ ಹಿಂಡು ದರ್ಶನ ನೀಡಿವೆ.
ಇದನ್ನೂ ಓದಿ: ನೀ ಇರಲು ಜೊತೆಯಲ್ಲಿ ನಾ ಮಲಗುವೆ ನೆಮ್ಮದಿಯಲ್ಲಿ – ಆನೆ ಮರಿಯ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವೇ?
ತಿರುಮಲ ಬೆಟ್ಟ ತಲುಪಲು ಇರುವ ಕಾಲುದಾರಿಯ ಮೊದಲ ತಿರುವಿನಲ್ಲಿ ಗುಂಪುಗುಂಪಾಗಿ ಆನೆಗಳು ಪ್ರತ್ಯಕ್ಷವಾಗಿವೆ. ಇದರಿಂದ ತಿಮ್ಮಪ್ಪನ ಭಕ್ತರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಘಾಟ್ ರಸ್ತೆ ಪಕ್ಕದಲ್ಲಿ ಆನೆಗಳ ಹಿಂಡು ಕಂಡುಬರುತ್ತಿದ್ದಂತೆ ವಾಹನಗಳೂ ಕೂಡಾ ಸುಮಾರು ಕಾಲ ನಿಂತಿವೆ. ಗಜಪಡೆ ಗುಂಪಿನಲ್ಲಿ ಐದು ಆನೆಗಳು, ಒಂದು ಚಿಕ್ಕ ಆನೆ ಇತ್ತು. ಮಾಹಿತಿಯನ್ನು ಪಡೆದ ಅರಣ್ಯ ಅಧಿಕಾರಿಗಳು ಆನೆಗಳ ಗುಂಪನ್ನು ಬೆನ್ನುಹತ್ತಿ, ಮತ್ತೆ ಅವುಗಳನ್ನು ಕಾಡಿನತ್ತ ಕಳುಹಿಸಲು ಪ್ರಯತ್ನಿಸಿದರು. ಕೆಲವು ದಿನಗಳ ಹಿಂದೆ ಶೇಷಾಚಲ ಕಾಡುಗಳ ಸುತ್ತುಮುತ್ತಲ ಗ್ರಾಮಗಳಿಗೆ ನುಗ್ಗಿ ಆನೆಗಳು ಕೋಲಾಹಲ ಎಬ್ಬಿಸಿದ್ದವು. ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿದ್ದವು. ಈ ಹಿಂದೆಯೂ ಆನೆಗಳನ್ನು ಕಾಡುಗಳತ್ತ ಮರಳಿ ಕಳಿಸಲು ಫಾರೆಸ್ಟ್ ಅಧಿಕಾರಿಗಳು ಪ್ರಯತ್ನಿಸಿದ್ದರು. ಈಗ ಮತ್ತೆ ಆನೆಗಳು ಘಾಟ್ ರಸ್ತೆಯಲ್ಲಿ ಪ್ರತ್ಯಕ್ಷವಾಗಿವೆ. ಇದರಿಂದಾಗಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಲ್ಲಿ ಆತಂಕ ಮೂಡಿದೆ.