ಮಾಡಾಳ್ ವಿರೂಪಾಕ್ಷಪ್ಪಗೆ ಕೊನೆಗೂ ಸಿಕ್ತು ಕಂಡೀಷನಲ್ ಬೇಲ್! – ಕೋರ್ಟ್ ವಿಧಿಸಿದ 5 ಷರತ್ತುಗಳೇನು?
ಬೆಂಗಳೂರು: ಲಂಚ ಹಾಗೂ ಕೋಟಿ ಕೋಟಿ ಹಣ ಪತ್ತೆ ಪ್ರಕರಣದಲ್ಲಿ ಸಿಕ್ಕಿ ಬಿದ್ದು, ನ್ಯಾಯಾಂಗ ಬಂಧನದಲ್ಲಿದ್ದ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಗೆ ಕೊನೆಗೂ ಬೇಲ್ ಸಿಕ್ಕಿದೆ. ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾ. ಜಯಂತ್ ಕುಮಾರ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಅಷ್ಟೇ ಅಲ್ಲದೇ ಜಾಮೀನು ನೀಡುವಾಗ ನ್ಯಾಯಮೂರ್ತಿಗಳು 5 ಷರತ್ತುಗಳನ್ನ ವಿಧಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ - ಸಿದ್ದರಾಮಯ್ಯಗೆ ತಪ್ಪಿದ ಕೋಲಾರ ಟಿಕೆಟ್
ನ್ಯಾಯಮೂರ್ತಿ ಅವರು ನೀಡಿರುವ 5 ಷರತ್ತುಗಳೆಂದರೆ, 3 ವಾರಕ್ಕೆ ಒಮ್ಮೆ ಲೋಕಾಯ್ತುಕ ಕಚೇರಿಗೆ ಹಾಜರಾಗಬೇಕು. ಲೋಕಾಯುಕ್ತ ಅಧಿಕಾರಿ ಕರೆದಾಗ ವಿಚಾರಣೆಗೆ ಹಾಜರಾಗಬೇಕು. ಪ್ರಕರಣದ ಸಾಕ್ಷಿಗೆ ಯಾವ ಕಾರಣಕ್ಕೂ ಪ್ರಭಾವ ಬೀರಬಾರದು. ಕೋರ್ಟ್ ವ್ಯಾಪ್ತಿ ಬಿಟ್ಟಿ ಬೇರೆ ಕಡೆ ಹೋಗಬಾರದು. ಅದರೊಂದಿಗೆ ಪಾಸ್ ಪೋರ್ಟ್ ಅನ್ನು ಸೆರೆಂಡರ್ ಮಾಡುವಂತೆ ಷರತ್ತು ವಿಧಿಸಲಾಗಿದೆ.
ಅಷ್ಟೇ ಅಲ್ಲದೇ 5 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡುವಂತೆ ತಿಳಿಸಲಾಗಿದೆ. ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆ ಒಳಗೆ ನ್ಯಾಯಾಲಯಕ್ಕೆ ಹಾಜರಾಗಬೇಕು. ತನಿಖೆ ಮುಕ್ತಾಯ ಆಗುವವರೆಗೂ ಕೆಎಸ್ ಡಿಎಲ್ ಕಚೇರಿಗೆ ಭೇಟಿ ನೀಡಬಾರದು. ಜೊತೆಗೆ ಹೈಕೋರ್ಟ್ ಮಾರ್ಗಸೂಚಿ ಪಾಲಿಸುವಂತೆ ಕೋರ್ಟ್ ಷರತ್ತು ವಿಧಿಸಿದೆ.
ಕಳೆದ ಮಾ.2ರಂದು ನಡೆದ ಲೋಕಾಯುಕ್ತ ದಾಳಿಯ ವೇಳೆ ಲಂಚ ಪಡೆಯುವುದು ಹಾಗೂ 8 ಕೋಟಿ ರೂ. ಅಕ್ರಮ ಹಣ ಸಂಪಾದನೆ ಕುರಿತಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನು ರದ್ದುಗೊಂಡ ಬೆನ್ನಲ್ಲೇ ಮಾ.27ರಂದು ಬಂಧನ ಮಾಡಲಾಗಿತ್ತು. ಅಂದಿನಿಂದ ಮಾ.31ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಬಂಧನ ಅವಧಿ ಪೂರ್ಣಗೊಂಡ ಹಿನ್ನೆಲೆ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿ , ಏ.11ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಿ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದೀಗ ಕೊನೆಗೂ ಮಾಡಾಳ್ ವಿರುಪಾಕ್ಷಪ್ಪಗೆ ಬೇಲ್ ಸಿಕ್ಕಿದೆ.