ಆ್ಯಕ್ಸಿಡೆಂಟ್ ಹಾಟ್ ಸ್ಪಾಟ್ ಆಗುತ್ತಿದ್ಯಾ ಸಿಲಿಕಾನ್ ಸಿಟಿ? – 3 ತಿಂಗಳಲ್ಲಿ ಅಪಘಾತಕ್ಕೆ ಬಲಿಯಾದವರೆಷ್ಟು?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 205 ಮಂದಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ ಅಂತಾ ವರದಿಯಾಗಿದೆ.
ಇದನ್ನೂ ಓದಿ: ಕಾಡಾನೆ ದಾಳಿಯಿಂದ ಗಂಭೀರ ಸ್ಥಿತಿ ತಲುಪಿದ ವೈದ್ಯ – ಶಿವಮೊಗ್ಗದಿಂದ ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಶಿಫ್ಟ್
ಬೆಂಗಳೂರು ಸಂಚಾರಿ ಪೊಲೀಸರು ಬಿಡುಗಡೆ ಮಾಡಿದ ವರದಿ ಪ್ರಕಾರ, ಕಳೆದ 3 ತಿಂಗಳಲ್ಲಿ 300 ಮಾರಣಾಂತಿಕ ಹಾಗೂ 997 ಮಾರಣಾಂತಿಕವಲ್ಲದ ರಸ್ತೆ ಅಪಘಾತಗಳು ಬೆಂಗಳೂರಿನಲ್ಲಿ ಸಂಭವಿಸಿವೆ. 2023 ರ ಜನವರಿ 1 ರಿಂದ ಮಾರ್ಚ್ ಅಂತ್ಯದವರೆಗೆ ಬೆಂಗಳೂರು ನಗರದಲ್ಲೇ ಒಟ್ಟು 1,197 ರಸ್ತೆ ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ 205 ಮಂದಿ ಮೃತಪಟ್ಟಿದ್ದು, 1,051 ಮಂದಿ ಗಾಯಗೊಂಡಿದ್ದಾರೆ.
ವಾಹನ ಚಾಲಕರು ಹಾಗೂ ಸವಾರರ ಪ್ರಕಾರ ಬೆಂಗಳೂರಿನಲ್ಲಿ ಇರುವ ಕೆಟ್ಟ ರಸ್ತೆಗಳು, ಅತಿ ವೇಗದ, ನಿರ್ಲಕ್ಷ್ಯದ ವಾಹನ ಚಲಾವಣೆಯೇ ಈ ಅಪಘಾತಗಳಿಗೆ ಕಾರಣ ಎಂದು ತಿಳಿದು ಬಂದಿದೆ. ಬೆಂಗಳೂರು ಮಹಾ ನಗರ ಸಂಚಾರಿ ಪೊಲೀಸರ ಬಳಿ ಇರುವ ದಾಖಲೆಗಳ ಪ್ರಕಾರ, ನಗರದಲ್ಲಿ ನಿರ್ಲಕ್ಷ್ಯದ ವಾಹನ ಚಾಲನೆ ಸಂಬಂಧ ಕಳೆದ ಮೂರು ತಿಂಗಳಲ್ಲಿ 660 ಪ್ರಕರಣಗಳು ದಾಖಲಾಗಿವೆ. ಅತಿ ವೇಗದ ವಾಹನ ಚಾಲನೆ ಸಂಬಂಧ 917 ಪ್ರಕರಣಗಳು ದಾಖಲಾಗಿವೆ. ಇನ್ನು ಸಿಗ್ನಲ್ ಜಂಪ್, ಲೇನ್ ಶಿಸ್ತು ಉಲ್ಲಂಘನೆ ಸಂಬಂಧ 2,32,626 ಪ್ರಕರಣಗಳು ದಾಖಲಾಗಿವೆ.