ಓಪನ್ ಜೀಪ್.. ಸಫಾರಿ ಸೂಟ್..! – ಬಂಡೀಪುರದಲ್ಲಿ ನರೇಂದ್ರ ಮೋದಿ ಸವಾರಿ..

ಓಪನ್ ಜೀಪ್.. ಸಫಾರಿ ಸೂಟ್..! – ಬಂಡೀಪುರದಲ್ಲಿ ನರೇಂದ್ರ ಮೋದಿ ಸವಾರಿ..

ಪ್ರಾಜೆಕ್ಟ್ ಟೈಗರ್ 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದಾರೆ. ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಆಚರಣೆಗಾಗಿ ಬಂಡೀಪುರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ‌ ಮೋದಿ ಅವರು ಬಂಡೀಪುರ ಹುಲಿ‌ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿದ್ದಾರೆ. ಮೈಸೂರಿನಿಂದ ಬೆಳಗ್ಗೆ ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ಬಂದಿಳಿದ ಮೋದಿ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ‌ ಡಿ.ಎಸ್. ರಮೇಶ್ ಅವರು  ಸ್ವಾಗತ ಕೋರಿದರು. ಬೆಳಗ್ಗೆ 7:35ರ ವೇಳೆಗೆ ಬಂಡೀಪುರ ಕ್ಯಾಂಪಸ್‌ಗೆ ತಲುಪಿದ ಮೋದಿ ಅವರು ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಬಯಸಿದರೆ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧ – ಡಿಕೆಶಿ

7:50ಕ್ಕೆ ತೆರೆದ ಜೀಪ್‌ನಲ್ಲಿ ಸುಮಾರು 2 ಗಂಟೆ ಸಫಾರಿ ಮಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದ ಸಫಾರಿ ಸೂಟ್ ಎಲ್ಲರ ಗಮನ ಸೆಳೆಯಿತು. ಪ್ರಧಾನಿ ಮೋದಿ ಅವರೊಂದಿಗೆ ದೆಹಲಿಯಿಂದ ಬಂದಿದ್ದ ಏಮ್ಸ್ ವೈದ್ಯರ ತಂಡ, ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್ ಪಿ ಪದ್ಮನಿ ಸಾಹು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯ‌ ಇಲಾಖೆಯ ವೈದ್ಯರ ತಂಡ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ‌ಇದ್ದರು. ಮೋದಿ ಅವರಿದ್ದ ವಾಹನದ ಜೊತೆಗೆ ಅಂಬುಲೆನ್ಸ್‌ ಸೇರಿದಂತೆ ಒಂಬತ್ತು ವಾಹನಗಳು ಸಾಗಿದ್ದವು. ಅರಣ್ಯದ ಕಚ್ಚಾ ರಸ್ತೆಯಲ್ಲೇ ಸಾಗಿ ಬೆಳಗ್ಗೆ 9:50ಕ್ಕೆ ಕೆಕ್ಕನಹಳ್ಳ ಚೆಕ್ ಪೋಸ್ಟ್‌ಗೆ ಮೋದಿ ತಲುಪಿದರು. ಅಲ್ಲಿಂದ ತಮ್ಮ ವಾಹನದಲ್ಲಿ ಹೆದ್ದಾರಿಯಲ್ಲೇ 5 ಕಿ.ಮೀ. ಸಾಗಿ ತಮಿಳುನಾಡಿನ ಮಧುಮಲೈ ಹುಲಿಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಮೋದಿ ತೆರಳಿದರು. ಇಲ್ಲಿ ಆನೆಗಳಿಗೆ ಕಬ್ಬನ್ನು ತಿನ್ನಿಸಿದರು. ಏಷ್ಯಾದ ಪ್ರಥಮ ಆನೆ ಕ್ಯಾಂಪ್ ತೆಪ್ಪಕಾಡಿನಲ್ಲಿ ಮೋದಿ‌ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಭೇಟಿಯಾದರು.

suddiyaana