ಮಲ್ಲಿಕಾರ್ಜುನ ಖರ್ಗೆ ಬಯಸಿದರೆ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧ – ಡಿಕೆಶಿ
ಜನಪ್ರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಯಸಿದರೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ದೇಶದ ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೇರಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುತ್ತೇವೆ ಎಂದು ಡಿ. ಕೆ ಶಿವಕುಮಾರ್ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯದಲ್ಲಿ 1972 ರಿಂದ ಅವರು ಕಾಂಗ್ರೆಸ್ ನಲ್ಲಿ ಇದ್ದವರು. ನಾನು 1985 ರಲ್ಲಿ ಬಂದಿದ್ದೇನೆ. ಕಾಂಗ್ರೆಸ್ ನ ಅತ್ಯಂತ ಹಿರಿಯ ನಾಯಕ ಖರ್ಗೆ ಆಗಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಪಕ್ಷಕ್ಕೆ ಅವರ ಕೊಡುಗೆ ಜಾಸ್ತಿ ಇದೆ. ನನಗಿಂತಲೂ 20 ವರ್ಷಗಳ ಕಾಲ ಹಿರಿಯ ರಾಜಕಾರಣಿ. ಅವರು ಶಾಸಕಾಂಗ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋದರು. ಹೀಗಾಗಿ ಪಕ್ಷನಿಷ್ಠ ಖರ್ಗೆಯವರು ಬಯಸಿದ್ರೆ ನಾನು ನನ್ನ ಅವಕಾಶ ಬಿಟ್ಟು ಕೊಡುತ್ತೀನಿ. ಅವರ ಕೈಕೆಳಗೆ ಕೆಲಸ ಮಾಡಲು ಸಿದ್ದನಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಡಿ.ಕೆ ಶಿವಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ಗುಡುಗಿದ್ದಾರೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗಿದ್ದಾಗ ಸೋನಿಯಾ ಗಾಂಧಿಯವರಿಗೆ ಸರ್ಕಾರ ರಚನೆಗೆ ಆಹ್ವಾನ ಕೊಟ್ಟರು. ಪ್ರಧಾನಿ ಆಗುವ ಅವಕಾಶ ಇದ್ದರೂ ಸೋನಿಯಾಗಾಂಧಿಯವರು ಅದನ್ನು ತ್ಯಾಗ ಮಾಡಿದರು. ಇದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮೊದಲು ತಿಳಿದುಕೊಳ್ಳಲಿ. ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈ ದೇಶಕ್ಕೆ ಸಾಕಷ್ಟು ತ್ಯಾಗ ಮಾಡಿದ್ದಾರೆ. ಸಿ ಟಿ ರವಿ ಅವರು ಇಂತಹ ಒಂದು ತ್ಯಾಗವನ್ನು ಪಂಚಾಯತಿ ಮಟ್ಟದಲ್ಲಿಯೂ ಮಾಡಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು.