ಪ್ರಧಾನಿ ಸ್ವಾಗತಕ್ಕೆ ಭರ್ಜರಿ ಸಿದ್ದತೆ – ದಿಂಬು, ಬೆಡ್‌ಶೀಟ್ ಮೇಲೂ ಮೋದಿ ಭಾವಚಿತ್ರ!
ಬಂಡೀಪುರ ಅರಣ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಆಗಿರುವುದರಿಂದ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಸಫಾರಿ ನಡೆಸಲಿದ್ದಾರೆ. ಇದೀಗ ಪ್ರಧಾನಿ ಮೋದಿಯನ್ನು ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಭರದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಮೋದಿ ಭೇಟಿ – ಏ. 6 ರಿಂದ 9 ರವರೆಗೆ ಏನೆಲ್ಲಾ ಬಂದ್?
ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿಯವರು ಮೈಸೂರಿನ ಪ್ರತಿಷ್ಠಿತ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಹೋಟೆಲ್ ನಲ್ಲಿ ಪ್ರಧಾನಿ ಮೋದಿಯನ್ನ ಸ್ವಾಗತಿಸಲು ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ.
ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಮೋದಿ ಭಾವಚಿತ್ರವಿರುವ ವಿಶೇಷ ಟವೆಲ್, ದಿಂಬಿನ ಕವರ್, ಬೆಡ್‌ಶೀಟ್ ಅನ್ನು ಸಿದ್ಧಪಡಿಸಲಾಗಿದೆ. ಅಷ್ಟೇ ಅಲ್ಲದೇ ವಿಶೇಷ ಟೇಬಲ್ ಟಾಪ್ ನಲ್ಲೂ Your Leadership inspires Us, Honorable Prime Minister ಅಂತಾ ಬರೆಸಲಾಗಿದೆ. ಅದರ ಹಿಂಭಾಗ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೆ ಮತ್ತು ಯೋಗ ಭಂಗಿಯ ಭಾವಚಿತ್ರವಿದ್ದು, ವೆಲ್ ಕಮ್ ಬ್ಯಾಕ್ ಅಂತ ಆಹ್ವಾನ ಪತ್ರಿಕೆ ತಯಾರಿಸಲಾಗಿದೆ.
ಮೋದಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಏಪ್ರಿಲ್ 6 ರಿಂದ 9 ರವರೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಬಂಡೀಪುರ ವ್ಯಾಪ್ತಿಯ ಎಲ್ಲಾ ಹೋಂಸ್ಟೇ, ರೆಸಾರ್ಟ್, ಲಾಡ್ಜ್ಗಳಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ನಿರ್ಬಂಧಿಸಲಾಗಿದೆ. ರಸ್ತೆ ನಿರ್ವಹಣೆ, ಪೂರ್ವ ಸಿದ್ದತೆ, ಹಾಗೂ ರಕ್ಷಣೆ ದೃಷ್ಟಿಯಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.
ಏಪ್ರಿಲ್ 9ರಂದು ರಾಜ್ಯಕ್ಕೆ ಆಗಮಿಸಲಿರುವ ಮೋದಿ, ಮೈಸೂರಿನಲ್ಲಿ 3 ದಿನಗಳ ಮೆಗಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಇತ್ತೀಚಿನ ಹುಲಿಗಣತಿ ವರದಿ, ಹುಲಿ ಸಂರಕ್ಷಣೆಗಾಗಿ ಸರ್ಕಾರ ಕೈಗೊಂಡ ಕ್ರಮಗಳ ವರದಿ, ಮತ್ತು ನಾಣ್ಯ ಸ್ಮರಣಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ.