ದಿ. ಆರ್. ಧ್ರುವನಾರಾಯಣ್ ಪತ್ನಿ ವಿಧಿವಶ
ಪತಿಯ ನಿಧನದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ವೀಣಾ
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್. ಧ್ರುವನಾರಾಯಣ್ ಮೃತಪಟ್ಟು ಒಂದು ತಿಂಗಳಾಗುವಷ್ಟರಲ್ಲೇ ಅವರ ಪತ್ನಿ ವೀಣಾ ಧ್ರುವನಾರಾಯಣ್ ಅವರು ಕೂಡ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ.
ಪತಿಯ ಅಕಾಲಿಕ ಸಾವಿನಿಂದ ವೀಣಾ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅದೇ ನೋವಿನಲ್ಲಿದ್ದ ವೀಣಾ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಶುಕ್ರವಾರ ಮುಂಜಾನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೇವಲ 28 ದಿನಗಳ ಅಂತರದಲ್ಲಿ ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಾದ ದರ್ಶನ್ ಮತ್ತು ಧೀರನ್ ಗೆ ಬರಸಿಡಿಲು ಬಡಿದಂತಾಗಿದೆ.
ಇದನ್ನೂ ಓದಿ: 1 ಮತದಿಂದ ವಿಧಾನಸೌಧ ಪ್ರವೇಶಿಸಿದ್ದ ನಾಯಕ – ಧ್ರುವನಾರಾಯಣ್ ರಾಜಕೀಯ ಹಾದಿಯೇ ರೋಚಕ!
ತಂದೆ ಧ್ರುವನಾರಾಯಣ ಮೃತಪಟ್ಟ ಹಿನ್ನೆಲೆ ದರ್ಶನ್ ಅವರಿಗೆ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ತಂದೆ ಸಾವಿನ ನೋವಲ್ಲೂ ಚುನಾವಣಾ ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದ ದರ್ಶನ್ ಗೆ ಇದೀಗ ತಾಯಿಯೂ ಮೃತಪಟ್ಟ ಸುದ್ದಿ ತೀವ್ರ ಆಘಾತ ನೀಡಿದೆ. ತಾಯಿಯ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ದರ್ಶನ್, ಮನೆಗೆ ಆಗಮಿಸಿದ್ದಾರೆ.
ಸಜ್ಜನ ನಾಯಕರಾಗಿ ಅಜಾತಶತ್ರು ಎನಿಸಿಕೊಂಡಿದ್ದ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದ ಆರ್ ಧ್ರುವನಾರಾಯಣ್ ಅವರು ಕಳೆದ ಮಾರ್ಚ್ 11 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆರ್ ಧ್ರುವನಾರಾಯಣ್ ಅವರ ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿದಿತ್ತು. ಆರ್ ಧ್ರುವನಾರಾಯಣ್ ಅವರು ಜನಪ್ರತಿನಿಧಿಯಾಗಿ ಸಲ್ಲಿಸಿದ ಸೇವೆಗೆ ಗೌರವ ಸೂಚಿಸುವ ಸಲುವಾಗಿ ಅವರ ಅಂತಿಮ ವಿಧಿವಿಧಾನದ ಸಂದರ್ಭ ಸರ್ಕಾರಿ ಗೌರವಗಳೊಂದಿಗೆ ನಮನ ಸಲ್ಲಿಸಲಾಗಿತ್ತು.