ರಾಮನ ಭಂಟ ಹನುಮ ಜಯಂತಿ ಸಂಭ್ರಮ – ಭಜರಂಗಿಯ ಇತಿಹಾಸ & ಮಹತ್ವ ಏನು ಗೊತ್ತಾ..!?

ರಾಮನ ಭಂಟ ಹನುಮ ಜಯಂತಿ ಸಂಭ್ರಮ – ಭಜರಂಗಿಯ ಇತಿಹಾಸ & ಮಹತ್ವ ಏನು ಗೊತ್ತಾ..!?

ರಾಮನ ಭಂಟ, ವಾಯುಪುತ್ರ, ಅಂಜನೀಪುತ್ರ, ಮಾರುತಿರಾಯ, ಆಂಜನೇಯ, ಹನುಮ. ಅಬ್ಬಬ್ಬಾ ಒಂದಾ ಎರಡಾ. ಹತ್ತಾರು ಹೆಸರುಗಳಿಂದ ಕರೆಸಿಕೊಳ್ಳುವ ಮಹಾಪರಾಕ್ರಮಿ ಭಜರಂಗಿ. ಭಗವಾನ್‌ ರಾಮನ ನಿಷ್ಠಾವಂತ ಒಡನಾಡಿಯಾದ ಹನುಮನು ಹಿಂದೂ ಧರ್ಮದ ಪ್ರತಿಯೊಬ್ಬರಿಗೂ ಚಿರಪರಿಚಿತ. ಇಂತಹ ವಜ್ರಕಾಯನ ಜಯಂತಿ ಇವತ್ತು. ಹಿಂದೂ ಪುರಾಣಗಳಲ್ಲಿ ಶಕ್ತಿವಂತನಾಗಿ ಕಾಣುವ ಪವನಸುತನ ಇತಿಹಾಸ ಮತ್ತು ಮಹತ್ವವನ್ನ ತಿಳಿದುಕೊಳ್ಳಲೇಬೇಕು.

ಹನುಮಾನ್‌ ಜಯಂತಿಗೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವಪೂರ್ಣ ಸ್ಥಾನವನ್ನು ನೀಡಲಾಗಿದೆ. ಏಕೆಂದರೆ ಈ ಹಬ್ಬ ಹಿಂದೂಗಳ ಅತ್ಯಂತ ಶಕ್ತಿಶಾಲಿ ದೇವನಾದ ಭಗವಾನ್‌ ಹನುಮಂತನಿಗೆ ಸಂಬಂಧಿಸಿದ ಹಬ್ಬವಾಗಿದೆ. ಆಂಜನೀಪುತ್ರನ ಜನ್ಮ ದಿನವನ್ನು ಸ್ಮರಿಸುವುದಕ್ಕಾಗಿ ಹನುಮಾನ್‌ ಜಯಂತಿಯನ್ನು ಆಚರಿಸಲಾಗುತ್ತದೆ.   ಹನುಮಾನ್ ಜನ್ಮೋತ್ಸವ ಎಂದೂ ಕರೆಯಲ್ಪಡುವ ಈ ಮಂಗಳಕರ ದಿನವು ಚೈತ್ರ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯಂದು ಬರುತ್ತದೆ. ಹನುಮ ಜಯಂತಿಯನ್ನು ಈ ವರ್ಷ ಏಪ್ರಿಲ್ 6 ರಂದು ಆಚರಿಸಲಾಗುತ್ತಿದೆ.

ಹನುಮ ಜಯಂತಿ ದಿನದಂದು ಭಕ್ತರು ಬಹಳ ಭಕ್ತಿ ಭಾವದಿಂದ ಆಂಜನೇಯನನ್ನು ಭಜಿಸುತ್ತಾರೆ. ಹಿಂದೂ ಧರ್ಮದಲ್ಲಿ ಹನುಮ ಜಯಂತಿಗೆ ವಿಶೇಷ ಮಹತ್ವವಿದೆ. ಇದನ್ನು ಹನುಮಾನ್‌ ಜಯಂತಿ, ಹನುಮಾನ್ ಜನ್ಮೋತ್ಸವ, ಆಂಜನೇಯ ಜಯಂತಿ, ಭಜರಂಗ ಬಲಿ ಜಯಂತಿ ಎಂದೂ ಕರೆಯುತ್ತಾರೆ. ಅಂಜನಾದೇವಿ ಹಾಗೂ ಕೇಸರಿಯ ಪುತ್ರ ಹನುಮಂತ. ಹನುಮದೇವನನ್ನು ವಾಯುದೇವರ ಮಗ ಎಂದೂ ಕರೆಯುತ್ತಾರೆ. ಹನುಮ ಜಯಂತಿಯಂದು ಭಕ್ತರು ಬಹಳ ಭಕ್ತಿ-ಭಾವದಿಂದ ಮಾರುತಿ ನಂದನನ ಜನ್ಮದಿನವನ್ನು ಆಚರಿಸುತ್ತಾರೆ. ಹನುಮ ದೇವಾಲಯಗಳಿಗೆ ಭೇಟಿ ನೀಡುವುದು, ಹನುಮಂತನನ್ನು ಪೂಜಿಸುವುದು, ಪೂಜಾ ಸ್ಥಳಗಳನ್ನು ಅಲಂಕರಿಸುವುದು, ಭಜನೆ, ಉಪವಾಸ ವೃತ ಮುಂತಾದ ಕ್ರಮಗಳಿಂದ ಹನುಮ ಜಯಂತಿಯ ಸಂಭ್ರಮವನ್ನು ಹೆಚ್ಚಿಸುವ ಜೊತೆಗೆ ಭಕ್ತಿಯಲ್ಲಿ ಮಿಂದೇಳುತ್ತಾರೆ. ಹಿಂದೂ ಕ್ಯಾಲೆಂಡರ್‌ ಪ್ರಕಾರ ಪೂರ್ಣಿಮಾ ತಿಥಿಯ ಶುಕ್ಲ ಪಕ್ಷದ ಚೈತ್ರ ಮಾಸದಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ.

ಹನುಮ ಜಯಂತಿಯ ಇತಿಹಾಸ

ಭಜರಂಗಿ ಜನ್ಮದಿನವನ್ನು ಹನುಮ ಜಯಂತಿಯನ್ನಾಗಿ ಆಚರಿಸಲಾಗುತ್ತದೆ. ಹನುಮಂತ ಶ್ರೀರಾಮನ ಕಟ್ಟಾ ಭಕ್ತ. ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಹನುಮಂತನಿಗೆ ಅಗ್ರಸ್ಥಾನವಿದೆ. ರಾಮಯುಗದಲ್ಲಿ ಅಂದರೆ ತ್ರೇತಾಯುಗದಲ್ಲಿ ಹನುಮಂತನ ಜನನವಾಯಿತು. ದೃಕ್‌ ಪಂಚಾಂಗದ ಪ್ರಕಾರ ಮಂಗಳವಾರದ ಸೂರ್ಯೋದಯದ ನಂತರ ಚೈತ್ರ ಪೂರ್ಣಿಮೆಯ ಸಮಯದಲ್ಲಿ ಹನುಮಂತನು ಜನಿಸಿದ್ದಾನೆ ಎಂದು ಉಲ್ಲೇಖಿತವಾಗಿದೆ. ಆಂಜನೇಯನು ಚಿತ್ರ ನಕ್ಷತ್ರ, ಮೇಷ ಲಗ್ನದಲ್ಲಿ ಜನಿಸಿದ್ದಾನೆ ಎಂಬುದು ಪುರಾಣ ಕಾವ್ಯಗಳಲ್ಲಿ ಉಲ್ಲೇಖವಿದೆ. ಹನುಮಂತನು ಮಹಾದೇವನ ಅವತಾರ ಮತ್ತು ಅಷ್ಟಸಿದ್ಧಿ ಹಾಗೂ ನವನಿಧಿಯನ್ನು ಹೊಂದಿರುವವನು ಎಂದು ಹೇಳಲಾಗುತ್ತದೆ. ಅವನು ಶಕ್ತಿ, ನಿಷ್ಠೆ ಹಾಗೂ ಭಕ್ತಿಯ ಪ್ರತಿನಿಧಿಯಾಗಿದ್ದಾನೆ. ಹನುಮಂತನನ್ನು ನೆನೆಯುವುದರಿಂದ ಜೀವನದಲ್ಲಿ ಸಾಮರಸ್ಯ, ಶಕ್ತಿ ಹಾಗೂ ಯಶಸ್ಸನ್ನು ಸಿಗುತ್ತದೆ ಎಂಬುದು ನಂಬಿಕೆ.

ಹನುಮ ಜಯಂತಿಯ ಮಹತ್ವ

ವಾಯುಸುತನ ಧೈರ್ಯ, ಸ್ವಯಂ ನಿಯಂತ್ರಣ, ಭಕ್ತಿಯ ಅತ್ಯುನ್ನತ ಸ್ಥಿತಿ, ಬುದ್ಧಿಶಕ್ತಿ, ಇಂದ್ರೀಯ ನಿಯಂತ್ರಣ ಹಾಗೂ ನಮ್ರತೆ ಮೂರ್ತರೂಪವಾಗಿದ್ದಾನೆ. ಮಾನವ ಸಾಮರ್ಥ್ಯದಲ್ಲಿ ಹನುಮ ದೇವರ ಎಲ್ಲಾ ಶ್ರೇಷ್ಠ ಗುಣಗಳನ್ನು ಅಳವಡಿಸಿಕೊಳ್ಳಲು ಹಾಗೂ ಪೂಜಿಸಲು ಈ ದಿನ ಅತ್ಯಂತ ಮಂಗಳಕರ ಸಮಯವಾಗಿದೆ. ಭಗವಾನ್‌ ಹನುಮಂತನು ಆಧ್ಯಾತ್ಮಿಕ ಪ್ರಯಾಣದಲ್ಲಿ ಶ್ರದ್ಧೆ ಹಾಗೂ ಭಕ್ತಿ ಭಾವದಿಂದ ಆಶೀರ್ವಾದವನ್ನು ಪಡೆಯುವ ಭಕ್ತ ಅಥವಾ ಸಾಧಕನಿಗೆ ಅಸಾಧಾರಣ ಶಕ್ತಿಯನ್ನು ಕರುಣಿಸುತ್ತಾನೆ ಎಂದು ನಂಬಲಾಗುತ್ತದೆ. ಹೆದ್ದಾರಿಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿನ ಹನುಮಾನ್ ದೇವಾಲಯಗಳ ಬಳಿ ಕೇಸರಿ ಧ್ವಜವು ಯಾವುದೇ ಅಹಿತಕರ ಘಟನೆ ಅಥವಾ ದುಷ್ಟ ಶಕ್ತಿಗಳ ಸಾಧ್ಯತೆಯ ವಿರುದ್ಧ ರಕ್ಷಣೆಯ ಸಂಕೇತವಾಗಿದೆ. ಹನುಮ ದೇವರು ಅಮರತ್ವದ ವರವನ್ನು ಹೊಂದಿದ್ದಾನೆ. ಇದೇ ಕಾರಣಕ್ಕೆ ಅವನನ್ನು ಚಿರಂಜೀವಿ ಎಂದೂ ಕರೆಯಲಾಗುತ್ತದೆ.

suddiyaana