9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ಯೋಗವು ಜಗತ್ತನ್ನು ಒಂದುಗೂಡಿಸುತ್ತದೆ ಎಂದ ಪ್ರಧಾನಿ ಮೋದಿ

9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ಯೋಗವು ಜಗತ್ತನ್ನು ಒಂದುಗೂಡಿಸುತ್ತದೆ ಎಂದ ಪ್ರಧಾನಿ ಮೋದಿ

ನವದೆಹಲಿ: ಜೂನ್‌ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಬುಧವಾರ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿನ ಜಿಲ್ಲಾ ಕೇಂದ್ರಗಳಲ್ಲಿ, ಹಲವು ಸಂಘ ಸಂಸ್ಥೆಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ.

ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಯೋಗ ದಿನಾಚರಣೆ ಆಚರಿಸಲಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮೋದಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 180 ದೇಶಗಳ ಗಣ್ಯರು ಭಾಗಿಯಾಗಲಿದ್ದಾರೆ. ಯೋಗ ದಿನ ಹಿನ್ನೆಲೆ ನ್ಯೂಯಾರ್ಕ್‌ನಿಂದ ಪ್ರಧಾನಿ ಮೋದಿ ವಿಶೇಷ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ಅಲ್ಲದೇ ಇದೇ ವೇಳೆ ಎಲ್ಲಾ ಭಾರತೀಯರಿಗೂ ಯೋಗ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: ಗೃಹಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ – ಮೂರು ದಿನದಲ್ಲಿ 8.16 ಲಕ್ಷ ಗ್ರಾಹಕರಿಂದ ನೋಂದಣಿ

ನಾನು ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಆಯೋಜಿಸಲಾಗುತ್ತಿರುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಭಾರತದ ಕರೆಗೆ 180ಕ್ಕೂ ಹೆಚ್ಚು ದೇಶಗಳು ಒಗ್ಗೂಡಿರುವುದು ಐತಿಹಾಸಿಕ. 2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಯೋಗ ದಿನದ ಪ್ರಸ್ತಾಪ ಬಂದಾಗ, ಅದನ್ನು ದಾಖಲೆ ಸಂಖ್ಯೆಯ ದೇಶಗಳು ಬೆಂಬಲಿಸಿದವು ಎಂದು ವಿಡಿಯೊ ಸಂದೇಶದಲ್ಲಿ ಸ್ಮರಿಸಿಕೊಂಡಿದ್ದಾರೆ.

ಯೋಗ ದಿನ ಆಚರಣೆ ಈಗ ಜಾಗತಿಕ ಉತ್ಸವ ರೀತಿ ಆಗಿದೆ. ಈ ವರ್ಷ ಯೋಗದ ಘೋಷವಾಕ್ಯ ವಸುದೈವ ಕುಟುಂಬಕಂ ಎಂದಾಗಿದ್ದು, ಲಕ್ಷಾಂತರ ಜನರು ಯೋಗ ಮಾಡುತ್ತಿದ್ದಾರೆ. ಯೋಗವು ಜಗತ್ತನ್ನು ಒಂದುಗೂಡಿಸುತ್ತದೆ. ‘ಏಕ್ ಭಾರತ್, ಶ್ರೇಷ್ಠ್ ಭಾರತ್’ ಎಂದು ನಾವು ಭಾರತವನ್ನು ವಿಶ್ವಕ್ಕೆ ಪ್ರತಿನಿಧಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಬೆಳಗ್ಗೆಯೇ ರಾಷ್ಟ್ರಪತಿ ಭವನದಲ್ಲಿ ಅಲ್ಲಿನ ಸಿಬ್ಬಂದಿಗಳು ಹಾಗೂ ಇತರರೊಂದಿಗೆ ಯೋಗದಲ್ಲಿ ಪಾಲ್ಗೊಂಡರು. ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ಸಹ ಯೋಗದಲ್ಲಿ ಪಾಲ್ಗೊಂಡಿದ್ದಾರೆ.

suddiyaana