ಹೊಸ ಅವತಾರದಲ್ಲಿ IPL ಟೂರ್ನಿ 74 ಅಲ್ಲ 94 ಪಂದ್ಯ.. ಹೇಗಿರುತ್ತೆ ರೂಲ್ಸ್?
ಯಾವಾಗ ಜಾರಿ? ಟೀಂ ಸಂಖ್ಯೆ ಹೆಚ್ಚುತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಹತ್ವದ ಬದಲಾವಣೆಯಾಗಲಿರುವುದು ಖಚಿತವಾಗಿದೆ. ಅದು ಕೂಡ ಪಂದ್ಯಗಳ ಸಂಖ್ಯೆಗಳ ಹೆಚ್ಚಳದೊಂದಿಗೆ ಎಂಬುದು ವಿಶೇಷ. ಅಂದರೆ ಐಪಿಎಲ್ 2028 ರಿಂದ ಹೆಚ್ಚುವರಿ 20 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಚಿಂತಿಸಿದೆ. ಈ ಹಿಂದೆಯೇ ಐಪಿಎಲ್ ಪಂದ್ಯಗಳ ಹೆಚ್ಚಳದ ಬಗ್ಗೆ ಬಿಸಿಸಿಐ ಚರ್ಚಿಸಿತ್ತು. ಅದರಂತೆ ಐಪಿಎಲ್ 2025 ಅಂದ್ರೆ ಈ ನಡೆಯುತ್ತಿಕೋ ಸೀಸನ್‌ನಲ್ಲಿ 84 ಪಂದ್ಯಗಳನ್ನು ಆಯೋಜಿಸಲು ಪ್ಲ್ಯಾನ್ ರೂಪಿಸಲಾಗಿತ್ತು. ಆದರೆ ಈ ಯೋಜನೆಯು ಈ ಬಾರಿಯ ಐಪಿಎಲ್ನಲ್ಲಿ ಕಾರ್ಯಗತವಾಗಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ವೇಳಾಪಟ್ಟಿ ಬಿಕ್ಕಟ್ಟು , ಪಂದ್ಯಗಳ ಹೆಚ್ಚಳದಿಂದಾಗಿ ವಿದೇಶಿ ಆಟಗಾರರು ಅಲಭ್ಯರಾಗುವ ಸಾಧ್ಯತೆ ಗಳಿದ್ದವು. ಆದರೀಗ 2028 ರಿಂದ 74 ಪಂದ್ಯಗಳ ಬದಲಿಗೆ 94 ಪಂದ್ಯಗಳನ್ನು ಆಯೋಜಿಸಲು ಚರ್ಚಿಸಿರುವುದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನ ಅಧ್ಯಕ್ಷ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ. ಸದ್ಯಕ್ಕೆ ಫ್ರಾಂಚೈಸಿಗಳ ಸಂಖ್ಯೆಯನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಐಪಿಎಲ್ ಅಧ್ಯಕ್ಷರು ಸ್ಪಷ್ಟಪಡಿಸಿದ್ದು, 2028ರಲ್ಲಿ ಪಂದ್ಯಗಳ ಸಂಖ್ಯೆ ಏರಿಕೆ ಮಾಡುವ ಸುಳಿವು ನೀಡಿದ್ದಾರೆ.
2022ರಲ್ಲಿ ಲೀಗ್‌ನಲ್ಲಿ ಗುಜರಾತ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳು ಸೇರ್ಪಡೆಯಾಗಿದ್ದವು. ಇದರಿಂದ ಪಂದ್ಯಗಳ ಸಂಖ್ಯೆ 60ರಿಂದ 74ಕ್ಕೆ ಏರಿಕೆ ಕಂಡಿತ್ತು. ಇದನ್ನು ಈ ಬಾರಿ 84ಕ್ಕೆ ಹೆಚ್ಚಿಸುವ ಯೋಜನೆ ಇತ್ತು. ಆದರೆ, ವೇಳಾಪಟ್ಟಿ ಬಿಕ್ಕಟ್ಟು ಮತ್ತು ಪ್ರಸಾರಕರು ಹಲವಾರು ಡಬಲ್ ಹೆಡರ್ ಅಂದರೆ ಒಂದೇ ದಿನ ಎರಡು ಪಂದ್ಯಗಳ ಬಗ್ಗೆ ಒಲವು ತೋರದೇ ಇದ್ದುದರಿಂದ ಈ ಪ್ಲ್ಯಾನ್ ಸಕ್ಸಸ್ ಆಗಿಲ್ಲ. ಆದರೆ ಭವಿಷ್ಯದಲ್ಲಿ ಪಂದ್ಯಗಳ ಸಂಖ್ಯೆ ಹೆಚ್ಚಿಸಲು ಬಿಸಿಸಿಐ ಯೋಜನೆ ರೂಪಿಸಿದೆ.
74 ಅಲ್ಲ 2028 ರಿಂದ 94 ಪಂದ್ಯ
ಮುಂದಿನ ಎರಡು ವರ್ಷಗಳವರೆಗೆ ಐಪಿಎಲ್ ಟೂರ್ನಿಯ ಯೋಜನೆ ಲಾಕ್ ಆಗಿದೆ. ಮಾರ್ಚ್ ಮಧ್ಯದಿಂದ ಮೇ ಅಂತ್ಯದವರೆಗೆ ಇದು ನಡೆಯಲಿದೆ. ಆದರೆ, 2028ರಲ್ಲಿ ಪ್ರಾರಂಭವಾಗಲಿರುವ ಮುಂದಿನ ಪ್ರಸಾರ ಹಕ್ಕುಗಳ ಮಾರಾಟದ ವೇಳೆ ಹೋಂ ಗ್ರೌಂಡ್ ಹಾಗೂ ಹೊರಗಿನ ಪಂದ್ಯಗಳ ಸಂಖ್ಯೆಯನ್ನು ಸಮಾನವಾಗಿಸಿ ಒಟ್ಟು ಪಂದ್ಯಗಳ ಸಂಖ್ಯೆಯನ್ನು 94ಕ್ಕೆ ವಿಸ್ತರಿಸಲು ಪ್ಲ್ಯಾನ್ ಮಾಡಲಾಗುತ್ತಿದೆ.
ಪ್ರತಿ ತಂಡಗಳ ಜೊತೆ ಎರೆಡೆರಡು ಪಂದ್ಯ
ಇನ್ನು ಹಿಂದಿನ ಸೀಸನ್‌ಗಳನ್ನು ನೋಡಿದಾಗ 2008ರಿಂದ 2010ರವರೆಗೆ ಕ್ರಮವಾಗಿ 59, 59 ಹಾಗೂ 60 ಪಂದ್ಯಗಳಿದ್ದವು. ನಂತರ ತಂಡದ ಸಂಖ್ಯೆಯನ್ನು ಹೆಚ್ಚಿಸಿದ್ದರಿಂದ ಇದು 2011ರಲ್ಲಿ 74 ಹಾಗೂ 2012, 2013ರಲ್ಲಿ 76ಕ್ಕೆ ತಲುಪಿತ್ತು. ಮತ್ತೆ 8 ತಂಡಗಳಿಗೆ ಐಪಿಎಲ್ ಸೀಮಿತವಾಗಿದ್ದರಿಂದ 2014 ರಿಂದ 2021ರವರೆಗೆ 60 ಪಂದ್ಯಗಳಿದ್ದವು. ಸದ್ಯ 2022ರಿಂದ 10 ತಂಡಗಳು ಹಾಗೂ 74 ಪಂದ್ಯಗಳು ನಡೆಯುತ್ತಿವೆ. ಮುಂದೆ 2028 ರ ವೇಳೆಗೆ 94 ಪಂದ್ಯ ನಡೆಯಲಿದೆ. 2028 ರಿಂದ ಐಪಿಎಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಇಲ್ಲಿ ಪ್ರತಿ ತಂಡಗಳು 18 ಪಂದ್ಯಗಳನ್ನಾಡಲಿದೆ. 9 ಪಂದ್ಯಗಳು ಹೋಮ್ ಗ್ರೌಂಡ್ನಲ್ಲಿ ನಡೆದರೆ, ಉಳಿದ 9 ಪಂದ್ಯಗಳು ಹೊರ ಮೈದಾನದಲ್ಲಿ ಜರುಗಲಿದೆ. ಈ ಮೂಲಕ ಲೀಗ್ ಹಂತದಲ್ಲಿ ಪ್ರತಿ ತಂಡಗಳು 18 ಪಂದ್ಯಗಳನ್ನಾಡಲಿದೆ.
ಏನಿದು ರೌಂಡ್ ರಾಬಿನ್ ಮಾದರಿ?
ಈಗ ಕೂಡ ಐಪಿಎಲ್ ರೌಂಡ್ ರಾಬಿನ್ ಮಾದರಿಯಲ್ಲೇ ನಡೆಯುತ್ತಿದೆ. ಆದರೆ ಪ್ರತಿ ತಂಡಗಳು 4 ಮ್ಯಾಚ್ಗಳನ್ನು ಕಡಿಮೆ ಆಡುತ್ತಿದೆ. ಅಂದರೆ 5 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಹಾಗೂ 4 ತಂಡಗಳ ವಿರುದ್ಧ ತಲಾ ಒಂದು ಪಂದ್ಯಗಳನ್ನಾಡಲಾಗುತ್ತಿದೆ. ಈ ಮೂಲಕ ಲೀಗ್ ಹಂತದಲ್ಲಿ ಪ್ರತಿ ತಂಡಗಳು ಒಟ್ಟು 14 ಪಂದ್ಯಗಳನ್ನು ಮಾತ್ರ ಆಡುತ್ತಿದೆ. ಈಗ ಈಗ ಯಾವ ಯಾವ ತಂಡಕ್ಕೆ ಎರಡೆರೆಡು ಮ್ಯಾಚ್ ಹಾಕಿದ್ರೆ ಜನ ನೋಡ್ತಾರೆ ಅನ್ನೋದನ್ನ ಅಳೆದು ತೂಗಿ 5 ಟೀಂಗೆ ರಿವೇಂಜ್ ಪಂದ್ಯ ಹಾಕಿದ್ರೆ ನಾಲ್ಕು ಟೀಂ ಜೊತೆ ಒಂದೊಂದು ಪಂದ್ಯ ಆಡಿಸಲಾಗುತ್ತಿದೆ.
ಒಂದು ಎಕ್ಸಾಂಪಲ್ ಕೊಡುವುದಾದ್ರೆ.. ಈ ಸಲ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಸಿಎಸ್ಕೆ, ಕೆಕೆಆರ್, ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಲಾ 2 ಪಂದ್ಯಗಳನ್ನಾಡುತ್ತಿದೆ. ಇದೇ ವೇಳೆ ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧ ಆಡುತ್ತಿರುವುದು ಕೇವಲ 1 ಪಂದ್ಯ ಮಾತ್ರ. ಆದರೆ 2028 ರಿಂದ ಪ್ರತಿ ತಂಡಗಳ ವಿರುದ್ಧ ಎರಡೆರಡು ಪಂದ್ಯಗಳನ್ನಾಡಲಾಗುತ್ತದೆ. ಈ ಮೂಲಕ ಲೀಗ್ ಹಂತದಲ್ಲಿ 90 ಪಂದ್ಯಗಳನ್ನು ಆಡಲಾಗುತ್ತದೆ. ಅಲ್ಲದೆ 4 ಪ್ಲೇಆಫ್ ಪಂದ್ಯಗಳನ್ನು ಒಳಗೊಂಡಂತೆ ಒಟ್ಟು 94 ಮ್ಯಾಚ್ಗಳ ಟೂರ್ನಿ ಆಯೋಜಿಸಲು ಐಪಿಎಲ್ ಗರ್ವನರ್ ಸಮಿತಿ ಪ್ಲ್ಯಾನ್ ರೂಪಿಸಿದೆ. ಪಂದ್ಯಗಳ ಸಂಖ್ಯೆ ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ಐಪಿಎಲ್ ಪ್ರಸಾರಕ ಸಂಸ್ಥೆಗಳು ಮುಂದಿಟ್ಟಿವೆ. ಹೀಗಾಗಿ ಇದೀಗ ಐಪಿಎಲ್ 2028 ರಿಂದ 94 ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಗಿದೆ. ಒಟ್ನಲ್ಲಿ ಹೆಚ್ಚು ವರಿ ಪಂದ್ಯಗಳನ್ನಾಡಿಸಿದ್ರೆ, ಐಪಿಎಲ್‌ಗೆ ಮತ್ತಷ್ಟು ಕಿಕ್ ಬರೋದು ಪಕ್ಕಾ..