ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ! – 9 ವರ್ಷಗಳ ಕೇಸ್ ಇತ್ಯರ್ಥ

ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ! – 9 ವರ್ಷಗಳ ಕೇಸ್ ಇತ್ಯರ್ಥ

ಕೊಲೆ ನಡೆದಾಗ ಪೊಲೀಸರು ಬಂದು ತನಿಖೆ ನಡೆಸುತ್ತಾರೆ. ಅಷ್ಟೇ ಅಲ್ಲದೇ ಘಟನಾ ಸ್ಥಳದಲ್ಲಿ ಏನಾದರು ಸುಳಿವು ಸಿಗುತ್ತದೆಯೇ ಅಂತಾ ಹುಡುಕಾಟ ನಡೆಸಿ, ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸುತ್ತಾರೆ. ಅಲ್ಲಿ ಯಾರಾದರೂ ಕೊಲೆಯನ್ನು ನೋಡಿದ್ದರೆ ಅವರನ್ನು ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಕರೆತರುತ್ತಾರೆ. ಆದರೆ ಆಗ್ರಾದಲ್ಲಿ ಕೊಲೆ ಕೇಸ್ ವೊಂದಕ್ಕೆ ನ್ಯಾಯಾಲಯದಲ್ಲಿ ಸಾಕ್ಷಿಹೇಳಲು ಹಾಜರುಪಡಿಸಿದ್ದು ಯಾವುದೇ ವ್ಯಕ್ತಿಯನ್ನಲ್ಲ, ಬದಲಾಗಿ ಅಲ್ಲಿ ಹಾಜರುಪಡಿಸಿದ್ದು ಗಿಳಿಯೊಂದನ್ನು!

ಇದನ್ನೂ ಓದಿ: 9 ವರ್ಷಗಳ ಹಿಂದೆ ಸತ್ತ ವ್ಯಕ್ತಿ ಮತ್ತೆ ಪ್ರತ್ಯಕ್ಷ! – ಪೊಲೀಸರು ತಲೆಕೆಡಿಸಿಕೊಂಡಿದ್ದೇಕೆ ಗೊತ್ತಾ?

ಹೌದು, ಫೆಬ್ರವರಿ 20, 2014ರಲ್ಲಿ ಆಗ್ರಾದ ಪ್ರಮುಖ ಪತ್ರಿಕೆಯ ಮುಖ್ಯ ಸಂಪಾದಕ ವಿಜಯ್ ಶರ್ಮಾ ಅವರು ತಮ್ಮ ಮಗ ಮತ್ತು ಮಗಳ ಜೊತೆ ಮದುವೆಗೆ ತೆರಳಿದ್ದರು. ಮದುವೆ ಮುಗಿಸಿ ಮನೆಗೆ ಬಂದಾಗ ಅವರಿಗೆ ಆಘಾತವೊಂದು ಕಾದಿತ್ತು. ಏಕೆಂದರೆ ಅವರ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಮನೆಯಲ್ಲಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಶರ್ಮಾ ಪತ್ನಿ ನೀಲಂ ಶರ್ಮಾ ಅವರನ್ನು ಹತ್ಯೆ ಮಾಡಿ, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದರು. ಈ ವೇಳೆ ವಿಜಯ್ ಶರ್ಮಾ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮನೆಗೆ ಬಂದು ತನಿಖೆ ನಡೆಸಿದ್ದರು. ಆದರೆ ಅವರಿಗೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿರಲಿಲ್ಲ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.

ಮತ್ತೊಂದೆಡೆ ವಿಜಯ್ ಶರ್ಮಾ ಅವರ ಮುದ್ದಿನ ಗಿಳಿ ಊಟ, ನೀರು ಬಿಡಲು ಪ್ರಾರಂಭಿಸಿತು. ಕೊಲೆ ವೇಳೆ ಮನೆಯಲ್ಲಿ ಗಿಳಿಯೊಂದೇ ಇದ್ದಿದ್ದರಿಂದ ಇದೇ ಸಾಕ್ಷಿಯಾಗಿರಬಹುದು ಎಂದು ಶರ್ಮಾ ಶಂಕಿಸಿದರು. ಬಳಿಕ ಅವರು ಗಿಳಿಯ ಮುಂದೆ ಶಂಕಿತರ  ಹೆಸರನ್ನು ಒಂದೊಂದಾಗಿ ಹೇಳಲು ಪ್ರಾರಂಭಿಸಿದ್ದಾರೆ. ಈ ವೇಳೆ ಪಕ್ಷಿಯು ಅಶು ಎಂಬ ಹೆಸರನ್ನು ಕೇಳಿ ಗಾಬರಿಗೊಂಡಿದೆ. ಬಳಿಕ  “ಅಶು-ಅಶು” ಎಂದು ಕಿರುಚಲು ಪ್ರಾರಂಭಿಸಿತ್ತು. ಬಳಿಕ ಶರ್ಮಾ ಅವರು ಪೊಲೀಸರಿಗೆ ವಿಚಾರ ತಿಳಿಸಿದ್ದರು.

ಪೊಲೀಸರು ಮನೆಗೆ ಆಗಮಿಸಿ ಗಿಳಿಯನ್ನು ವಿಚಾರಿಸಿದ್ದರು. ಈ ವೇಳೆ ಆಶು ಹೆಸರಿಗೆ ಅದೇ ಪ್ರತಿಕ್ರಿಯೆ ನೀಡಿದೆ. ಗಿಳಿ ನೀಡಿದ ಸಾಕ್ಷಿ ಮೇರೆಗೆ ಪೊಲೀಸರು ಅಶುನನ್ನು ಬಂಧಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಕೊಲೆ ನಡೆದು 9 ವರ್ಷಗಳ ಬಳಿಕ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ.

ಆಗ್ರಾದ ವಿಶೇಷ ನ್ಯಾಯಾಧೀಶ ಮೊಹಮ್ಮದ್ ರಶೀದ್ ಅವರು ಆರೋಪಿಗಳಾದ ಅಶು ಮತ್ತು ರೋನಿ ಇಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು ಅಶು ಅವರ ತಪ್ಪೊಪ್ಪಿಗೆ ಮತ್ತು ಸಾಕ್ಷ್ಯಾಧಾರದ ಮೇಲೆ 72,000 ರೂ. ದಂಡವನ್ನೂ ವಿಧಿಸಿದ್ದಾರೆ.

ಈ ಬಗ್ಗೆ ವಿಜಯ್ ಶರ್ಮಾ ಅವರ ಮಗಳು ನಿವೇದಿತಾ ಮಾತನಾಡಿದ್ದು, ಘಟನೆ ನಡೆದ ಆರು ತಿಂಗಳ ನಂತರ ಈ ಗಿಳಿ ಸಾವನ್ನಪ್ಪಿದೆ. ತಂದೆ ವಿಜಯ್ ಶರ್ಮಾ ನವೆಂಬರ್ 14, 2020 ರಂದು ನಿಧನರಾದರು. ನನ್ನ ತಂದೆ ಅಶುವನ್ನು ಗಲ್ಲಿಗೇರಿಸಬೇಕೆಂದು ಬಯಸಿದ್ದರು. ಇಡೀ ಕುಟುಂಬವು ಅವನನ್ನು ಶಿಕ್ಷಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು” ಎಂದು ನಿವೇದಿತಾ ಹೇಳಿದರು.

suddiyaana