ಕೊರೊನಾ ಟೈಂನಲ್ಲಿ ಕಸ್ಟಡಿಯಲ್ಲಿ ತಂದೆ- ಮಗನ ಕೊ*ಲೆ – ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ

ದೇಶವನ್ನೇ ಬೆಚ್ಚಿಬೀಳಿಸಿದ್ದ 2020ರ ತಮಿಳುನಾಡಿನ ಸಾತಂಕುಲಂ ತಂದೆ-ಮಗನ ಕಸ್ಟಡಿ ಸಾವಿನ ಪ್ರಕರಣದಲ್ಲಿ, ಮಧುರೈ ನ್ಯಾಯಾಲಯವು 9 ಮಂದಿ ಪೊಲೀಸ್ ಸಿಬ್ಬಂದಿಗೆ ಮರಣದಂಡನೆ ವಿಧಿಸಿದೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದಡಿ ಬಂಧಿತರಾಗಿದ್ದ ಜಯರಾಜ್ ಮತ್ತು ಬೆನ್ನಿಕ್ ಅವರಿಗೆ ಪೊಲೀಸರು ಕ್ರೂರ ಚಿತ್ರಹಿಂಸೆ ನೀಡಿದ್ರು, ನಂತ್ರ ಇವರಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ರು. ಇದು ಆಕ್ರೋಶಕ್ಕೆ ಕಾರಣವಾಗಿ, ಸಿಬಿಐ ತನಿಖೆ ಕೈಗೊಂಡು ಇವರ ಸಾವಿಗೆ ಪೊಲೀಸರೇ ಕಾರಣ ಅನ್ನೋದು ಗೊತ್ತಾಗಿತ್ತು. ಸದ್ಯ ಈ ಬಗ್ಗೆ ತೀರ್ಪು ನೀಡಿದ ಕೋರ್ಟ್ 9 ಜನ ಪೊಲೀಸರಿಗೆ ಮರಣ ದಂಡನೆ ಜೊತೆಗೆ 1.40 ಕೋಟಿ ದಂಡ ಹಾಕಿದೆ.
ಇದನ್ನೂ ಓದಿ: ಮಳೆಯಿಂದ PBKS VS KKR ಪಂದ್ಯ ರದ್ದು – ಅಂಕ ಪಟ್ಟಿಯಲ್ಲಿ RCBನ ಹಿಂದಿಕ್ಕಿದ ಪಂಜಾಬ್
ಇದು ಕೊರೋನಾ ಲಾಕ್ ಡೌನ್ ಕಾಲದಲ್ಲಿ ನಡೆದ ಘಟನೆಯಾಗಿದೆ. ತಂದೆ ಜಯರಾಜ್ (58) ಮತ್ತು ಪುತ್ರ ಬೆನ್ನಿಕ್ಸ್ (31) ಅವರನ್ನು ಕೋವಿಡ್ 19 ಲಾಕ್‌ಡೌನ್ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು 2020ರ ಜೂನ್ 19ರಂದು ಬಂಧಿಸಿದ್ದರು. ಕೆಲವು ದಿನಗಳ ನಂತರ ಕೋವಿಲ್‌ಪಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು. ಇಬ್ಬರಿಗೂ ಕಸ್ಟಡಿಯಲ್ಲಿ ತೀವ್ರ ಚಿತ್ರಹಿಂಸೆ ನೀಡಲಾಗಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಆರೋಪಿಗಳಲ್ಲಿ ಒಬ್ಬರಾಗಿದ್ದ ಸ್ಪೆಷಲ್ ಸಬ್-ಇನ್ಸ್‌ಪೆಕ್ಟರ್ ಪೌಲ್ದುರೈ, ವಿಚಾರಣೆಯ ಸಮಯದಲ್ಲಿ ಕೋವಿಡ್ 19 ಸೋಂಕಿಗೆ ಒಳಗಾಗಿ ನಿಧನರಾದರು. ಸಾತಂಕುಲಂ ಪ್ರಕರಣವು ದೇಶಾದ್ಯಂತ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿತ್ತು
ಪ್ರಕರಣದ ತನಿಖೆ ನಡೆಸಿದ ಕೇಂದ್ರ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ವಿಧಿವಿಜ್ಞಾನ ಸಾಕ್ಷ್ಯಗಳು, ವೈದ್ಯಕೀಯ ವರದಿಗಳು ಮತ್ತು ಸಾಕ್ಷಿಗಳ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಸಾತಂಕುಲಂ ಪೊಲೀಸ್ ಠಾಣೆಯೊಳಗಿನ ಹಲ್ಲೆ ನಿರಂತರ ಮತ್ತು ಕ್ರೂರವಾಗಿದೆ ಎಂದು ಸಾಬೀತು ಪಡಿಸಿದರು. ಠಾಣೆಯಾದ್ಯಂತ ಕಂಡುಬರುವ ರಕ್ತದ ಕಲೆಗಳು ಮತ್ತು ಮರಣೋತ್ತರ ವರದಿಗಳಲ್ಲಿ ದಾಖಲಿಸಲಾದ ಗಾಯಗಳು ಪ್ರಮುಖ ಪುರಾವೆಗಳಾಗಿವೆ ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಮಧುರೈ ಕೋರ್ಟ್ .. ಅಪರೂಪದ ತೀರ್ಪು ನೀಡಿದೆ. ನ್ಯಾಯಮೂರ್ತಿ ಜಿ. ಮುತ್ತುಕುಮಾರನ್ ಈ ತೀರ್ಪು ದೇಶದ ಇತಿಹಾಸದಲ್ಲೇ ಅಪರೂಪ ಎಂದು ಬಣ್ಣಿಸಿದರು. ʼʼಕಾನೂನು ಕಾಪಾಡಬೇಕಾದ ಪೊಲೀಸರೇ ಅದನ್ನು ಉಲ್ಲಂಘಿಸಿದ್ದಾರೆ. ತಂದೆ-ಮಗನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅವರ ಸಾವಿಗೆ ಕಾರಣರಾಗಿದ್ದಾರೆ. ಜಯರಾಜ್ ಮತ್ತು ಬೆನ್ನಿಕ್ಸ್ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಇಲ್ಲದಿದ್ದರೂ ಪೊಲೀಸರು ಹಿಂಸೆ ನೀಡಿದ್ದಾರೆ. 9 ಜನ ಪೊಲೀಸ್ ಅಧಿಕಾರಿಗಳಿ ಮರಣ ದಂಡನೆ ನೀಡಿ, ಮೃತರ ಕುಟುಂಬಕ್ಕೆ 1.40 ಕೋಟಿ ರುಪಾಯಿ ಪರಿಹಾರ ನೀಡುವಂತೆಯೂ ಅಪರಾಧಿಗಳಿಗೆ ಸೂಚಿಸಲಾಗಿದೆʼʼ ಎಂದು ಹೇಳಿದರು.

ನೋಡಿರಿ

