80 ಓವರ್.. ನ್ಯೂ ಬಾಲ್ ರೂಲ್ಸ್ ಏನು? – ಅಂಪೈರ್ ಜೊತೆ ಪದೇಪದೆ ಕಿರಿಕ್ ಸರಿನಾ?

80 ಓವರ್.. ನ್ಯೂ ಬಾಲ್ ರೂಲ್ಸ್ ಏನು? – ಅಂಪೈರ್ ಜೊತೆ ಪದೇಪದೆ ಕಿರಿಕ್ ಸರಿನಾ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಮ್ಯಾಚನಲ್ಲಿ ಒಂದು ವಿಚಾರವನ್ನ ನೀವೆಲ್ಲಾ ಗಮನಿಸಿದ್ದೀರಾ. ಟೀಂ ಇಂಡಿಯಾ ಪ್ಲೇಯರ್ಸ್ ಪದೇಪದೆ ಬಾಲ್ ಚೇಂಜ್ ಮಾಡಿ ಅಂತಾ ಅಂಪೈರ್ ಬಳಿ ಹೋಗುತ್ತಿದ್ದರು. ಆದರೆ, ಅಂಪೈರ್ ಮಾತ್ರ ಮನವಿಯನ್ನ ನಯವಾಗಿಯೇ ತಿರಸ್ಕರಿಸುತ್ತಿದ್ದರು. ಹಾಗಾದರೆ, ಟೆಸ್ಟ್ ಮ್ಯಾಚಲ್ಲಿ ಬಾಲ್ ಚೇಂಜ್​ಗೆ ಏನೆಲ್ಲಾ ರೂಲ್ಸ್ ಇದೆ?. ಯಾವಾಗ ಬದಲಾವಣೆ ಮಾಡಬಹುದು? ಅನ್ನೋ ಬಗ್ಗೆ ವಿಸ್ತೃತ ವರದಿ ಇಲ್ಲಿದೆ.

ಇದನ್ನೂ ಓದಿ: ENG ವಿರುದ್ಧ ರಿವೇಂಜ್ ಗೆ ರೆಡಿ – ಬುಮ್ರಾ ಔಟ್.. ಸಿಂಗ್ ಇನ್.. ಠಾಕೂರ್?

ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದುದ್ದಕ್ಕೂ ಬಾಲ್ ಚೇಂಜ್ ವಿವಾದ ಜೋರಾಗಿತ್ತು. ಅದೂ ಕೂಡ ಭಾರತೀಯ ಆಟಗಾರರಿಂದಲೇ ಹೆಚ್ಚು ಗೊಂದಲ ಸೃಷ್ಟಿಯಾಗಿದ್ದು. ಟೀಂ ಇಂಡಿಯಾ ಪರ ವಿಕೆಟ್​ಗಳು ಬೀಳದೇ ಇದ್ದಾಗಲೇ ಜಾಸ್ತಿ ಹೊಸ ಬಾಲ್​ಗೆ ಡಿಮ್ಯಾಂಡ್ ಮಾಡುತ್ತಿದ್ದರು. ಅಂಪೈರ್​ಗಳಾದ ಕ್ರಿಸ್ ಗಫಾನಿ ಮತ್ತು ಪಾಲ್ ರೀಫೆಲ್ ಬಳಿ ಮನವಿ ಮಾಡುತ್ತಿದ್ದರು. ಒಂದ್ಸಲ ಅಂತೂ ತೀರಾ ಅತಿರೇಕ ಅನ್ನಿಸಿಬಿಟ್ಟಿತ್ತು. ಇಂಗ್ಲೆಂಡ್ ಫ್ಯಾನ್ಸ್ ಕೂಡ ಜೋರಾಗಿ ಕೂಗಿ ವ್ಯಂಗ್ಯ ಮಾಡುವಂತೆ ರಿಯಾಕ್ಟ್ ಮಾಡಿದ್ರು. ಭಾರತೀಯ ಪ್ಲೇಯರ್ಸ್ ಅದೆಷ್ಟರ ಮಟ್ಟಿಗೆ ದುಂಬಾಲು ಬಿದ್ದಿದ್ರು ಅಂದರೆ ಅಂಪೈರ್ ಮ್ಯಾಚ್ ರೆಫರಿಗೆ ದೂರು ಕೂಡ ಕೊಟ್ಟಿದ್ದಾರೆ.

ಲೀಡ್ಸ್ ನಲ್ಲಿ ನಡೆದ ಪಂದ್ಯದ ಮೂರನೇ ದಿನದ ಮೊದಲ ಸೆಷನ್​​ನಲ್ಲಿ ಚೆಂಡಿನ ವಿಚಾರವಾಗಿ ಮೊದಲು ತಗಾದೆ ಶುರುವಾಯ್ತು. ಭಾರತೀಯ ಆಟಗಾರರ ಪ್ರಕಾರ ಚೆಂಡಿನ ಆಕಾರ ಹದಗೆಟ್ಟಿದ್ದು, ಇದನ್ನು ಬದಲಿಸಬೇಕು ಎಂಬ ಬೇಡಿಕೆಯಿತ್ತು. ಇಂಗ್ಲೆಂಡ್‌ ಇನ್ನಿಂಗ್ಸ್​ನ 61 ನೇ ಓವರ್‌ನಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಚೆಂಡನ್ನು ಅಂಪೈರ್ ಬಳಿಗೆ ತೆಗೆದುಕೊಂಡು ಹೋಗಿ ಅದನ್ನು ಪರೀಕ್ಷಿಸುವಂತೆ ಒತ್ತಾಯಿಸಿದರು. ಅಂಪೈರ್ ಗೇಜ್ ಅಂದ್ರೆ ಅಳತೆ ಸಾಧನ ಬಳಸಿ ಚೆಂಡನ್ನು ಪರಿಶೀಲಿಸಿದರು. ಚೆಂಡು ಸುಲಭವಾಗಿ ಗೇಜ್ ಮೂಲಕ ಹೋಯ್ತು.ಸೋ ಅಲ್ಲಿಗೆ ಅದು ಚೆಂಡು ಸರಿಯಾಗಿದೆ ಎಂದು ಅರ್ಥ. ಇದ್ರಿಂದ ಪಂತ್ ಸಿಟ್ಟಾಗಿ ಕೋಪದಿಂದ ಚೆಂಡನ್ನು ನೆಲದ ಮೇಲೆ ಎಸೆದೇ ಬಿಟ್ಟರು. ಈ ವಿವಾದ ಇಲ್ಲಿಗೇ ಮುಗಿಯಿತಾ ಅಂದ್ರೆ ಇಲ್ಲ. ಇದಾದ ಎರಡು ಓವರ್‌ಗಳ ನಂತರ, 63 ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಕೂಡ ಚೆಂಡಿನ ಸ್ಥಿತಿಯನ್ನು ಪ್ರಶ್ನಿಸಿ ಅದನ್ನು ಬದಲಾಯಿಸುವಂತೆ ಅಂಪೈರ್‌ಗೆ ಮನವಿ ಮಾಡಿದರು. ಅಂಪೈರ್ ಮತ್ತೊಮ್ಮೆ ಗೇಜ್‌ನೊಂದಿಗೆ ಚೆಂಡನ್ನು ಪರಿಶೀಲಿಸಿದರು. ಈ ಬಾರಿಯೂ ನಿಯಮಗಳ ಪ್ರಕಾರ ಚೆಂಡು ಸರಿಯಾಗಿದೆ ಎಂದು ಕಳಿಸಿಸಿದ್ದರು. ಜಸ್ಪ್ರೀತ್ ಬುಮ್ರಾ ಕೂಡ ಅಂಪೈರ್ ಜೊತೆ ಕನ್ವಿನ್ಸ್ ಮಾಡೋಕೆ ಟ್ರೈ ಮಾಡಿದ್ರು. ಇನ್ನು ಕ್ಯಾಪ್ಟನ್ ಶುಭ್​ಮನ್ ಗಿಲ್ ಕೂಡ ಬಂದು ಮಾತನಾಡಿದ್ರು. ಅಂಪೈರ್ ಮಾತ್ರ ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲ. ಕೊನೆಗೆ ಅದೇ ಬಾಲ್​ನಲ್ಲೇ ಬೌಲಿಂಗ್ ಮುಂದುವರಿಸಿದ್ರು. ಕೊನೆಗೆ ಚೆಂಡಿನ ಸ್ಥಿತಿ ತುಂಬಾ ಕೆಟ್ಟದಾಗಿದ್ದರಿಂದ, 74 ನೇ ಓವರ್‌ನ ನಂತರ ಅಂಪೈರ್ ಚೆಂಡನ್ನು ಬದಲಾಯಿಸಲು ನಿರ್ಧರಿಸಿದರು. ಈ ಬಾಲ್ ಚೇಂಜ್ ತಗಾದೆ ಇಲ್ಲಿಗೇ ಮುಗೀತಾ ಅಂದ್ರೆ ಇಲ್ಲ ಐದನೇ ದಿನದಾಟದಲ್ಲೂ ಇದೇ ರಿಪೀಟ್ ಆಗಿತ್ತು. ಅತ್ತ ಕ್ರೌಲಿ ಮತ್ತು ಡಕೆಟ್ ಜೋಡಿ ಕ್ರೀಸ್ ಕಚ್ಚಿ ರನ್ ಪೇರಿಸ್ತಿದ್ರೆ ಇತ್ತ ವಿಕೆಟ್ ಕೀಳೋಕೆ ಆಗದ ಭಾರತೀಯ ಆಟಗಾರರು ಮತ್ತೊಮ್ಮೆ ಬಾಲ್ ಚೇಂಜ್​ಗೆ ಮನವಿ ಮಾಡಿದರು. ಅಂಪೈರ್ ಗೇಜ್ ಚೆಕ್ ಮಾಡಿ ಅದನ್ನ ನಿರಾಕರಿಸಿ ಕಳಿಸ್ತಿದ್ರು.

ಈ ಬಾಲ್ ಬದಲಾವಣೆ ವಿವಾದ ಸದ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಅಂಪೈರ್ ವಿರುದ್ಧ ಪಂತ್ ವಾಗ್ವಾದಕ್ಕಿಳಿದಿದ್ದರಿಂದ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಈ ಕಾರಣದಿಂದಾಗಿ ಐಸಿಸಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಶಿಕ್ಷೆಯನ್ನು ನೀಡಿದೆ. ಲೆವೆಲ್ 1 ಅಪರಾಧಕ್ಕೆ ಕನಿಷ್ಠ ದಂಡವು ಪಂದ್ಯ ಶುಲ್ಕದ 50% ಅಥವಾ ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ ಇದ್ಯಾವುದು ಇಲ್ಲದಿದ್ದರೆ ಎಚ್ಚರಿಕೆ ನೀಡಲಾಗುತ್ತದೆ. ಇದಿಷ್ಟು ಬಾಲ್ ಚೇಂಜ್ ಕಾಂಟ್ರವರ್ಸಿ. ಹಾಗಾದ್ರೆ ಬಾಲ್ ಬದಲಾವಣೆ ನಿಮಯಗಳ ಬಗ್ಗೆ ನೋಡ್ತಾ ಹೋಗೋಣ.

ಟೆಸ್ಟ್ ಕ್ರಿಕೆಟ್​ನಲ್ಲಿ ಬೌಲಿಂಗ್ ತಂಡಕ್ಕೆ ಚೆಂಡು ಯಾವ ಸ್ಟೇಜ್​ನಲ್ಲಿ ಇದೆ ಅನ್ನೋದು  ಫಲಿತಾಂಶವನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಿದೆ. ಪ್ರತಿ ಇನ್ನಿಂಗ್ಸ್‌ನ ಆರಂಭದಲ್ಲಿ ಹೊಸ ಚೆಂಡನ್ನು ಬಳಸಲಾಗುತ್ತದೆ. ಈ ಹೊಸ ಚೆಂಡು ವೇಗದ ಬೌಲರ್‌ಗಳಿಗೆ ಹೆಚ್ಚಿನ ಬೌನ್ಸ್, ಸ್ವಿಂಗ್ ಮತ್ತು ಸ್ಪೀಡ್ ಕೊಡುತ್ತೆ. ಈ ಸಮಯದಲ್ಲಿ ಹೆಚ್ಚು ವಿಕೆಟ್​ಗಳನ್ನ ಉರುಳಿಸೋಕೆ ಅವ್ರಿಗೆ ಅಡ್ವಾಂಟೇಜಸ್ ಸಿಗುತ್ತೆ. ಬಟ್ ಇನ್ನಿಂಗ್ಸ್ ಮುಂದುವರೆದಂತೆ, ಚೆಂಡು ಸವೆದುಹೋಗುತ್ತದೆ. ಆಗ ಮೊದಲಿನಂತಿದ್ದ ಸ್ವಿಂಗ್‌ ಕಡಿಮೆಯಾಗಿ ಎಫೆಕ್ಟ್ ಕೂಡ ಕುಸಿಯುತ್ತೆ. ಈ ಟೈಮಲ್ಲಿ  ಸ್ಪಿನ್ ಅಥವಾ ರಿವರ್ಸ್ ಸ್ವಿಂಗ್‌ಗೆ ಹೆಚ್ಚು ಉಪಯುಕ್ತವಾಗುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿರೋ ಒಂದು ಪ್ರಮುಖ ನಿಯಮ ಅಂದ್ರೆ 80 ಓವರ್‌ಗಳ ನಂತರ ಹೊಸ ಚೆಂಡನ್ನ ಬಳಸೋಕೆ ಅವಕಾಶ ಕೊಡ್ತಾರೆ. 80 ಓವರ್​ಗಳ ಮೈಲಿಗಲ್ಲು ತಲುಪಿದ ನಂತರ, ಬೌಲಿಂಗ್ ತಂಡವು ಹೊಸ ಚೆಂಡನ್ನು ಆಯ್ಕೆ ಮಾಡಬಹುದು. ಹಾಗಂತ ನ್ಯೂ ಬಾಲ್ ತಗೊಳ್ಳೇಬೇಕು ಅಂತೇನೂ ಇಲ್ಲ. ಫೀಲ್ಡಿಂಗ್ ತಂಡದ ನಾಯಕನ ಮೇಲೆ ಇದು ಡಿಪೆಂಡ್ ಆಗಿರುತ್ತೆ. ಬಾಲ್ ಚೆನ್ನಾಗಿದೆ, ಎದುರಾಳಿ ಬ್ಯಾಟರ್ಸ್ ಮೇಲೆ ಪ್ರಾಬಲ್ಯ ಸಾಧಿಸ್ತಿದ್ದೇವೆ ನಾವು ಇದ್ರಲ್ಲೇ ಕಂಟಿನ್ಯೂ ಮಾಡ್ಬೋದು ಅಂದ್ರೆ ಅದಕ್ಕೂ ಅವಕಾಶ ಇದೆ. ಅಂದ್ರೆ ಹಳೆಯ ಚೆಂಡು ಎಫೆಕ್ಟಿವ್ ಆಗಿ ರಿವರ್ಸ್ ಸ್ವಿಂಗ್ ಆಗ್ತಿದ್ರೆ ಅಥವಾ ಸ್ಪಿನ್‌ಗೆ ಸಹಾಯ ಮಾಡುತ್ತಿದ್ದರೆ ಅದೇ ಪ್ರೆಶರ್ ಮತ್ತು ಕಂಟ್ರೋಲ್​ನ ಕಂಟಿನ್ಯೂ ಮಾಡೋಕೆ ಕ್ಯಾಪ್ಟನ್ ನಿರ್ಧಾರ ತಗೊಳ್ತಾರೆ. ಹಾಗಂತ ಕಂಪ್ಲೀಟ್ 80 ಓವರ್ ಆಗೋವರೆಗೂ ಬಾಲ್ ಬದಲಿಸೋಕೆ ಚಾನ್ಸೇ ಇಲ್ವ ಅಂದ್ರೆ ಖಂಡಿತ ಬದಲಾವಣೆ ಮಾಡ್ಬೋದು. 80 ಓವರ್‌ಗಳು ಪೂರ್ಣಗೊಳ್ಳುವ ಮೊದಲು, ಚೆಂಡನ್ನು ಬದಲಾಯಿಸಬಹುದಾದ ಕೆಲ ಸಿಚುಯೇಷನ್ಸ್ ಇದೆ. ಒಂದು ವೇಳೆ ಚೆಂಡು ಕಳೆದುಹೋದರೆ ಅಥವಾ ಸ್ಟ್ಯಾಂಡ್‌ಗಳಿಗೆ ಅಥವಾ ಕ್ರೀಡಾಂಗಣದ ಹೊರಗೆ ಹೊಡೆದರೆ ಅಂಪೈರ್‌ಗಳು ಆಗ ಬಾಲ್ ಬದಲಾವಣೆ ಮಾಡ್ತಾರೆ. ಹಾಗಂತ ಅಲ್ಲೇನು ಹೊಸ ಬಾಲ್ ಕೊಡೋದಿಲ್ಲ. ಕಳೆದು ಹೋಗಿರೋ ಬಾಲ್​ ರೀತಿಯಲ್ಲೇ ಸವೆತವಿರುವ ಮತ್ತೊಂದು ಬಾಲ್​ನಿಂದ ಬದಲಾಯಿಸ್ತಾರೆ. ಹಾಗೇ ಚೆಂಡು ಡ್ಯಾಮೇಜ್ ಆಗಿದ್ರೆ ಅಥವಾ ನೋಡಿದಾಗ ಇದು ಆಟಕ್ಕೆ ಬಳಸಲು ಅನರ್ಹವೆಂದು ಪರಿಗಣಿಸಲ್ಪಟ್ಟರೆ ಅಂಪೈರ್‌ಗಳು ಅದನ್ನು ಬದಲಾಯಿಸಲು ನಿರ್ಧರಿಸಬಹುದು. ಇದೆಲ್ಲದರ ಹೊರತಾಗಿ ಚೆಂಡನ್ನು ವಿರೂಪಗೊಳಿಸಿದ ಪ್ರಕರಣಗಳಲ್ಲಿ ಕೂಡ ಬೇರೆ ಬಾಲ್ ನೀಡ್ತಾರೆ. ಫಾರ್ ಎಕ್ಸಾಂಪಲ್ ಕೃತಕ ವಿಧಾನಗಳಿಂದ ಚೆಂಡನ್ನು ಉಜ್ಜುವುದು ಅಥವಾ ವಿರೂಪಗೊಳಿಸಿದ್ದು ಕಂಡು ಬಂದ್ರೆ ಅಂಪೈರ್‌ಗಳು ಚೆಂಡನ್ನು ಬದಲಾಯಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಹಾಗೇ ಆಟದ ನಿಯಮಗಳ ಅಡಿಯಲ್ಲಿ ಫೀಲ್ಡಿಂಗ್ ತಂಡದ ವಿರುದ್ಧ ಶಿಸ್ತು ಕ್ರಮವನ್ನ ಕೈಗೊಳ್ಳಬಹುದು. ಚೆಂಡನ್ನು ಬದಲಾಯಿಸುವ ನಿರ್ಧಾರವು ಯಾವಾಗಲೂ ಅಂಪೈರ್‌ಗಳ ಮೇಲಿರುತ್ತದೆ, ಅವರು ಬಳಸಿದ ಚೆಂಡು ನ್ಯಾಯಯುತ ಮತ್ತು ನಿಯಮಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.

 

Sulekha