ಚೈತ್ರ & ಗ್ಯಾಂಗ್ ನಿಂದ 80% ಆಸ್ತಿ ಜಪ್ತಿ – ವಂಚನೆ ಪ್ರಕರಣದಲ್ಲಿ ಮೊದಲ ಬಾರಿಗೆ ಸಿಸಿಬಿ ಪೊಲೀಸರ ದಾಖಲೆ

ಚೈತ್ರ & ಗ್ಯಾಂಗ್ ನಿಂದ 80% ಆಸ್ತಿ ಜಪ್ತಿ – ವಂಚನೆ ಪ್ರಕರಣದಲ್ಲಿ ಮೊದಲ ಬಾರಿಗೆ ಸಿಸಿಬಿ ಪೊಲೀಸರ ದಾಖಲೆ

ಬೈಂದೂರು ಬಿಜೆಪಿ ಟಿಕೆಟ್ ಕೊಡಿಸೋದಾಗಿ ಉದ್ಯಮಿಗೆ ವಂಚಿಸಿದ ಪ್ರಕರಣ ಸಂಬಂಧ ಈಗಾಗಲೇ ಚೈತ್ರ ಕುಂದಾಪುರ ಮತ್ತು ಗ್ಯಾಂಗ್ ಪೊಲೀಸರ ವಶದಲ್ಲಿದೆ. ಚೈತ್ರ ಕುಂದಾಪುರ, ಅಭಿನವ ಹಾಲಶ್ರೀ ಸೇರಿದಂತೆ ಪ್ರಕರಣದ ಆರೋಪಿಗಳನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ ಸಿಸಿಬಿ ಅಧಿಕಾರಿಗಳು ಇದೇ ಮೊದಲ ಬಾರಿಗೆ ದಾಖಲೆಯನ್ನು ಮಾಡಿದ್ದಾರೆ.

ಸಿಸಿಬಿ ಪೊಲೀಸರು ಇದೇ ಮೊದಲ ಬಾರಿಗೆ ವಂಚನೆ ಪ್ರಕರಣವೊಂದರಲ್ಲಿ ಶೇ. 80 ರಷ್ಟು ಹಣವನ್ನು ರಿಕವರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್‌ನಿಂದ ಎಂಎಲ್ಎ ಟಿಕೆಟ್ ಡೀಲ್ ಕೇಸ್‌ನಲ್ಲಿ ಕಡಿಮೆ ಅವಧಿಯಲ್ಲಿ 80% ಮೊತ್ತದ ಹಣ, ಆಸ್ತಿ ಜಪ್ತಿ ಮಾಡಿದ್ದಾರೆ. ಉಡುಪಿಯ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಬಿಜೆಪಿಯಿಂದ ವಿಧಾನಸಭಾ ಚುನಾವಣೆಯ ಟಿಕೆಟ್ ಆಸೆಗೆ ಬಿದ್ದು 5 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದರು. ಇದೀಗ ಉದ್ಯಮಿ ಕಳೆದುಕೊಂಡಿದ್ದ ಹಣದಲ್ಲಿ ಶೇ.80 ರಷ್ಟನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ವಿವಿಧೆಡೆ ‘ಕಾವೇರಿ ನೀರು’ ಪೂರೈಕೆಯಲ್ಲಿ ವ್ಯತ್ಯಯ!

ಚೈತ್ರಾ ಕುಂದಾಪುರ ಬಳಿಯಿಂದ 81 ಲಕ್ಷ ನಗದು, 23 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಸಹಕಾರಿ ಬ್ಯಾಂಕ್‌ನಲ್ಲಿ 1.08 ಕೋಟಿ ಮೌಲ್ಯದ ಎಫ್ ಡಿ ಜೊತೆಗೆ 12 ಲಕ್ಷ ಮೌಲ್ಯದ ಕಿಯಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಗಗನ್ ಕಡೂರ್, ಧನರಾಜ್ ರಮೇಶ್ ರಿಂದ 26 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅಭಿನವ ಹಾಲಾಶ್ರೀ ಬಳಿ 56 ಲಕ್ಷ ನಗದು, 25 ಲಕ್ಷ ಮೌಲ್ಯದ ಕಾರು ಜಪ್ತಿ ಮಾಡಲಾಗಿದೆ. ಇನ್ನು ಉಳಿದ ಹಣದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದು, ಸದ್ಯ ಚೈತ್ರಾ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು 4 ಕೋಟಿಯಷ್ಟು ಹಣವನ್ನು ರಿಕವರಿ ಮಾಡಿದ್ದಾರೆ. ರಿಕವರಿಯಾದ ಹಣ, ಆಸ್ತಿ, ಆಭರಣಗಳಿಂದ ಕೇಸ್ ಗೆ ಮತ್ತಷ್ಟು ಪುಷ್ಟಿ ಸಿಕ್ಕಿದ್ದು, ಹಣ, ಆಭರಣ, ಆಸ್ತಿ, ಕಾರು ಪತ್ತೆಯಿಂದ ಈ ಪ್ರಕರಣದಲ್ಲಿ ಆರೋಪಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಸದ್ಯ ಪೊಲೀಸರು ಉಡುಪಿಯ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್‌ನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

Shantha Kumari