8 ವರ್ಷದ ಬಾಲಕಿಯ ಬಲಿ ಪಡೆದ ಮೊಬೈಲ್ – ಫೋನ್‌ನಲ್ಲಿ ವೀಡಿಯೋ ನೋಡುತ್ತಿದ್ದಾಗಲೇ ಸ್ಫೋಟ..!
ಮಕ್ಕಳೇ…ಹುಷಾರ್.. ಫೋನ್ ಕಣ್ಣಿಗಷ್ಟೇ ಡೇಂಜರ್ ಅಲ್ಲ.. ಜೀವಕ್ಕೂ ಕಂಟಕ..!
ಮಕ್ಕಳಿಗೆ ಈಗ ಬೇಸಿಗೆ ರಜೆ. ಆಟ ಆಡುತ್ತಾ ಕಾಲ ಕಳೆಯುತ್ತಾರೆ ಅನ್ನೋದು ನಿಜ. ಆದರೆ, ಈ ಸುಡು ಬಿಸಿಲಿನಲ್ಲಿ ಆಡುವುದು ಕೂಡಾ ಕಷ್ಟವೇ. ಬೆಳಗ್ಗೆ ಒಂದು ರೌಂಡು, ಸಂಜೆ ಒಂದು ರೌಂಡು ಆಟವಾಡುವ ಮಕ್ಕಳು ಬೇರೆ ಹೊತ್ತಲ್ಲಿ ಅಂಟಿಕೊಂಡಿರುವುದು ಮೊಬೈಲ್ ಅಥವಾ ಟಿವಿಗೆ. ಈಗೀಗ ಮಕ್ಕಳಿಗೆ ಮೊಬೈಲೇ ಪ್ರಪಂಚವಾಗಿದೆ. ಮೊಬೈಲ್ ಗೀಳು ಅಂಟಿಸಿಕೊಂಡಿರುವ ಮಕ್ಕಳು ಇನ್ಮುಂದೆ ಹುಷಾರಾಗಿರಲೇಬೇಕು. ಜೊತೆಗೆ ಪೋಷಕರು ಕೂಡಾ ಮಕ್ಕಳ ವಿಚಾರದಲ್ಲಿ ಜಾಗರೂಕರಾಗಿಲೇಬೇಕು. ಯಾಕೆಂದರೆ, ಇಲ್ಲೊಬ್ಬಳು 8 ವರ್ಷದ ಬಾಲಕಿಗೆ ಮೊಬೈಲೇ ಶಾಪವಾಗಿ ಪರಿಣಮಿಸಿದೆ. ಮಗುವಿನ ಪ್ರಾಣವನ್ನೇ ಬಲಿಪಡೆದಿದೆ.
ಇದನ್ನೂ ಓದಿ: ರಾತ್ರಿಯಿಡೀ ಮೊಬೈಲ್ ಚಾರ್ಜ್ ಗೆ ಇಟ್ಟು ಹೋದ ಅಂಗಡಿ ಮಾಲೀಕ – ಆಮೇಲೆ ನಡೆದಿದ್ದು ದೊಡ್ಡ ಅವಾಂತರ
ಮೊಬೈಲ್ ನೋಡುತ್ತಾ ಇದ್ದಾಗ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ. ಸೋಮವಾರ ತಡರಾತ್ರಿ ಕೇರಳದ ತಿರುವಿಲ್ವಾಮಲದಲ್ಲಿ ಈ ಘಟನೆ ನಡೆದಿದೆ ಆದಿತ್ಯಶ್ರೀ ಸೋಮವಾರ ರಾತ್ರಿ ಸುಮಾರು 10:30ರ ವೇಳೆಗೆ ಮೊಬೈಲ್ ಫೋನ್ ನಲ್ಲಿ ವೀಡಿಯೋ ನೋಡುತ್ತಾ ಕುಳಿತಿದ್ದಳು. ಮೊಬೈಲ್ ಆಕೆಯ ಕೈಯಲ್ಲೇ ಇತ್ತು. ಆಗ ಇದ್ದಕ್ಕಿದ್ದಂತೆ ಮೊಬೈಲ್ ಸ್ಫೋಟಗೊಂಡಿದೆ. ಇದರ ಪರಿಣಾಮ ಬಾಲಕಿಗೆ ಗಂಭೀರ ಗಾಯಗಳಾಗಿತ್ತು. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾಳೆ. ಆದಿತ್ಯಶ್ರಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನಾದರೂ ಪೋಷಕರು ಮತ್ತು ಮಕ್ಕಳು ಹುಷಾರಾಗಿರಲೇಬೇಕು. ಈಗಿನ ಮಕ್ಕಳಿಗೆ ಫೋನ್ ಬೇಕೇಬೇಕು. ಮಕ್ಕಳ ಹಠದಿಂದಾಗಿ ಪೋಷಕರು ಕೂಡಾ ಸ್ವಲ್ಪ ಹೊತ್ತು ಅಂತಾ ವಾರ್ನಿಂಗ್ ಮಾಡುತ್ತಲೇ ಫೋನ್ ಕೊಡ್ತಾರೆ. ಆದರೆ, ಕೆಲವೊಮ್ಮೆ ಇಂಥಾ ಘಟನೆಗಳು ಮಕ್ಕಳ ಪಾಲಿಗೆ ಎಚ್ಚರಿಕೆಯ ಗಂಟೆ ಕೂಡಾ ಆಗಿರುತ್ತೆ.. ಮಕ್ಕಳೇ.. ಇನ್ಮುಂದೆ ನೀವು ಕೂಡಾ ಹುಷಾರಾಗಿರಿ. ಮೊಬೈಲ್ ನಿಮ್ಮ ಕಣ್ಣುಗಳಿಗೆ ಮಾತ್ರ ಅಪಾಯಕಾರಿ ಅಲ್ಲ. ನಿಮ್ಮ ಜೀವಕ್ಕೂ ಸಂಚಕಾರಿ.