17 ವರ್ಷ.. 8 ಸೀಸನ್.. 1 ಟ್ರೋಫಿ – ಸೂಪರ್ 8ನಲ್ಲೇ ಮುಗ್ಗರಿಸಿತಾ IND?
ರೋHITಗೆ ಚಾಂಪಿಯನ್ ಚಾಲೆಂಜ್

17 ವರ್ಷ.. 8 ಸೀಸನ್.. 1 ಟ್ರೋಫಿ – ಸೂಪರ್ 8ನಲ್ಲೇ ಮುಗ್ಗರಿಸಿತಾ IND?ರೋHITಗೆ ಚಾಂಪಿಯನ್ ಚಾಲೆಂಜ್

ಟಿ-20 ವಿಶ್ವಕಪ್​ನಲ್ಲಿ ಸೂಪರ್ 8 ಸುತ್ತಿಗೆ ಸೆಲೆಕ್ಟ್ ಆಗಿರೋ ಟೀಂ ಇಂಡಿಯಾಗೆ ಅಸಲಿ ಸವಾಲು ಇಲ್ಲಿಂದ ಶುರುವಾಗಲಿದೆ. ಲೀಗ್ ಹಂತದಲ್ಲಿ ಹ್ಯಾಟ್ರಿಕ್ ಗೆಲುವಿನ ಜೋಶ್​ನಲ್ಲಿದ್ರೂ ಕೂಡ  ಮುಂದಿನ 3 ಮ್ಯಾಚ್​ಗಳನ್ನ ಗೆಲ್ಲೋದೇ ನಿರ್ಣಾಯಕವಾಗಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೇ ಆಸ್ಟ್ರೇಲಿಯಾವನ್ನ ಬಗ್ಗು ಬಡಿದ್ರೆ ಮಾತ್ರ ಸೆಮೀಸ್​ಗೆ ಎಂಟ್ರಿ ಕೊಡೋಕೆ ಸಾಧ್ಯ. ಆದ್ರೆ ಈ ತಂಡಗಳನ್ನ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ. ಟಿ-20 ವಿಶ್ವಕಪ್​ನ ಕಳೆದ 8 ಆವೃತ್ತಿಗಳಲ್ಲಿ ಟೀಂ ಇಂಡಿಯಾ ಸೂಪರ್ 8 ಸುತ್ತಿನಲ್ಲೇ ಸಾಕಷ್ಟು ಸಲ ಮುಗ್ಗರಿಸಿದೆ. ಈ ಬಾರಿಯೂ ಕೂಡ ರೋಹಿತ್ ಪಡೆಗೆ ಇದೇ ಟೆನ್ಷನ್ ಕಾಡ್ತಿದೆ. ಹಾಗಾದ್ರೆ ಹಿಂದಿನ ಸೀಸನ್​ಗಳಲ್ಲಿ ಭಾರತ ತಂಡ ಹೇಗೆ ಪ್ರದರ್ಶನ ನೀಡಿದೆ? ಎಷ್ಟು ಸಲ ಸೂಪರ್ 8 ಸುತ್ತಿನಲ್ಲಿ ಮುಗ್ಗರಿಸಿದೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 4 ಓವರ್‌, 0 ರನ್, 3 ವಿಕೆಟ್‌ – ಚರಿತ್ರೆ ಸೃಷ್ಟಿಸಿದ RCB ಬೌಲರ್

ಐರ್ಲೆಂಡ್, ಪಾಕಿಸ್ತಾನ ಹಾಗೂ ಅಮೆರಿಕ ತಂಡಗಳ ಎದುರು ರೋಚಕ ಗೆಲುವು ಸಾಧಿಸಿ ಟೀಂ ಇಂಡಿಯಾ ಸೂಪರ್ 8 ಸುತ್ತಿಗೆ ಕಾಲಿಟ್ಟಿದೆ. ಇದೀಗ ಸೆಮೀಸ್​ಗೆ ಕಾಲಿಡ್ಬೇಕು ಅಂದ್ರೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ತಂಡಗಳನ್ನು  ಭಾರತ ಎದುರಿಸಬೇಕಿದೆ. ಟೂರ್ನಿಯಲ್ಲಿ ಭಾರತ ತಂಡ ಇಲ್ಲಿಯವರೆಗೆ ಅಜೇಯವಾಗಿದೆ. ಆದ್ರೂ ಕೂಡ ಸೂಪರ್-8ಸುತ್ತಿನಲ್ಲಿ ಭಾರತ ತಂಡ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಮೂಡಿದೆ. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 20 ರಂದು ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಇದರ ನಂತರ ಜೂನ್ 22 ರಂದು ಬಾಂಗ್ಲಾದೇಶ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ. ಕೊನೆಯದಾಗಿ ಜೂನ್ 24 ರಂದು ಆಸ್ಟ್ರೇಲಿಯಾ ವಿರುದ್ಧ ಮೂರನೇ ಪಂದ್ಯವನ್ನು ಆಡಬೇಕಾಗಿದೆ. ಅಷ್ಟಕ್ಕೂ ಭಾರತ ಸೂಪರ್ 8 ಸುತ್ತಿನಲ್ಲಿ ಈ ಹಿಂದಿನ ಆವೃತ್ತಿಗಳಲ್ಲಿ ಹೇಗೆ ಪ್ರದರ್ಶನ ನೀಡಿದೆ ಅನ್ನೋ ವಿವರ ಇಲ್ಲಿದೆ.

ಸೂಪರ್ -8 ಸವಾಲ್!  

2007ರಲ್ಲಿ ಆರಂಭವಾದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಮೊದಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಪಾಕಿಸ್ತಾನವನ್ನು ಸೋಲಿಸುವ ಮೂಲಕ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇದರ ನಂತರ 2009 ರಲ್ಲಿ ಎರಡನೇ ಆವೃತ್ತಿಯಲ್ಲೂ ಭಾರತ ಸೂಪರ್-8 ಪ್ರವೇಶಿಸಿತ್ತು. ಈ ಸುತ್ತಿನಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮೂರು ತಂಡಗಳನ್ನು ಎದುರಿಸಿತ್ತು. ವಿಪರ್ಯಾಸ ಅಂದ್ರೆ ಈ ಮೂರೂ ತಂಡಗಳ ವಿರುದ್ಧ ಭಾರತ ಸೋತಿತ್ತು. ಇದರೊಂದಿಗೆ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಹಾಗೇ 2010ರ ವಿಶ್ವಕಪ್‌ನಲ್ಲಿ ಸಿ ಗುಂಪಿನ ಭಾಗವಾಗಿದ್ದ ಭಾರತ ತನ್ನ ಎರಡೂ ಪಂದ್ಯಗಳನ್ನು ಗೆದ್ದು ಸೂಪರ್-8 ಪ್ರವೇಶಿಸಿತ್ತು. ಆ ಬಳಿಕ ಸೂಪರ್-8ಸುತ್ತಿನಲ್ಲಿ ಆಸ್ಟ್ರೇಲಿಯ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಎದುರಿಸಿದ್ದ ಟೀಂ ಇಂಡಿಯಾ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಸೋತಿತ್ತು. ಇದರೊಂದಿಗೆ ತಂಡವು ಗುಂಪಿನಲ್ಲಿ ಕೊನೆಯ ಸ್ಥಾನ ಗಳಿಸಿ ಪ್ರಯಾಣವನ್ನು ಅಂತ್ಯಗೊಳಿಸಿತ್ತು. 2012ರ ವಿಶ್ವಕಪ್‌ನಲ್ಲಿಯೂ ಭಾರತ ಮತ್ತೊಮ್ಮೆ ಸೂಪರ್-8ಸುತ್ತಿನಿಂದ ಹೊರಬಿದ್ದಿತ್ತು. ಈ ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಸೂಪರ್-8 ಪ್ರವೇಶಿಸಿತ್ತು. ಈ ಸುತ್ತಿನಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಿದ್ದ ಭಾರತ 2 ತಂಡಗಳ ವಿರುದ್ಧ ಗೆದ್ದು, ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಆದರೆ ನೆಟ್ ರನ್ ರೇಟ್ ವಿಚಾರದಲ್ಲಿ ಪಾಕಿಸ್ತಾನಕ್ಕಿಂತ ಹಿಂದಿದ್ದರಿಂದ ಭಾರತ ತಂಡ ಈ ಬಾರಿಯೂ ಸೂಪರ್-8ಸುತ್ತಿನಿಂದ ಹೊರಬಿದ್ದಿತ್ತು. ಇನ್ನು 2014ರಲ್ಲಿ ಫಿನಾಲೆ ತಲುಪಿದ್ದ ಟೀಂ ಇಂಡಿಯಾ ಶ್ರೀಲಂಕಾ ಎದುರು ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಹಾಗೇ 2016ರಲ್ಲಿ ಸೆಮಿಫೈನಲ್ ನಲ್ಲಿ ಹೊರಬಿದ್ರೆ 2021ರಲ್ಲಿ ಸೂಪರ್ 12 ರೇಸ್​ನಲ್ಲೇ ಹೊರ ಬಿದ್ದಿತ್ತು. ಇನ್ನು 2022ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ರೂ ಕೂಡ ಫೈನಲ್ ಪ್ರವೇಶಿಸೋಕೆ ಸಾಧ್ಯವಾಗಿರಲಿಲ್ಲ.

ಆದರೆ ಈ ಬಾರಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿರೋ ಭಾರತ ಟ್ರೋಫಿ ಗೆಲ್ಲೋ ನಿರೀಕ್ಷೆಯಲ್ಲಿದೆ. 17 ವರ್ಷಗಳಿಂದ ಕೈಗೆ ಸಿಗದ ಟ್ರೋಫಿಯನ್ನ ಈ ಬಾರಿ ಶತಾಯ ಗತಾಯ ತನ್ನದಾಗಿಸಿಕೊಳ್ಳೋಕೆ ಸರ್ವಪ್ರಯತ್ನವನ್ನೂ ಮಾಡ್ತಿದ್ದಾರೆ. ಭಾರತ ತಂಡ ಪ್ರಸಕ್ತ ವಿಶ್ವಕಪ್‌ನಲ್ಲಿ ಸೂಪರ್-8 ಸುತ್ತಿನಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳನ್ನು ಎದುರಿಸಲಿದೆ. ಈ ಮೂರೂ ತಂಡಗಳ ವಿರುದ್ಧ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ. ಆದರೆ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ಈಗಿನ ಫಾರ್ಮ್ ನೋಡಿದರೆ ಭಾರತ ತಂಡದ ಪಯಣ ಸೆಮಿಫೈನಲ್‌ವರೆಗೆ ಸುಲಭವಲ್ಲ. ಹೀಗಾಗಿ ಈ ಸುತ್ತಿನಲ್ಲಿ ಭಾರತ ಎಚ್ಚರಿಕೆಯಿಂದ ಆಡುವುದು ಅವಶ್ಯಕವಾಗಿದೆ.

ಮೂರು ತಂಡ.. ನೂರು ಸವಾಲು!  

ಭಾರತ ಮತ್ತು ಅಫ್ಘಾನಿಸ್ತಾನ 9ನೇ ಬಾರಿ ಟಿ20 ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಲಿವೆ. ಭಾರತ ಇದಕ್ಕೂ ಮುನ್ನ ಆಡಿದ 8 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ. 1 ಪಂದ್ಯ ಟೈ ಆಗಿದ್ದರೆ 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಅಂದರೆ ಅಫ್ಘಾನಿಸ್ತಾನ ತಂಡ ಇದುವರೆಗೆ ಭಾರತದ ವಿರುದ್ಧ ಯಾವುದೇ ಟಿ20 ಪಂದ್ಯವನ್ನು ಗೆದ್ದಿಲ್ಲ. ಭಾರತ ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಇದು ಟಿ20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ 14ನೇ ಮುಖಾಮುಖಿಯಾಗಿದೆ. ಭಾರತ ಈ ಮೊದಲು ಆಡಿದ 13 ಪಂದ್ಯಗಳಲ್ಲಿ 12 ಪಂದ್ಯಗಳಲ್ಲಿ ಗೆದ್ದಿದೆ. ಉಳಿದಂತೆ 1 ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದಿದೆ. ಮೂರನೇ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಇದು ಟಿ20 ಕ್ರಿಕೆಟ್‌ನಲ್ಲಿ ಉಭಯ ತಂಡಗಳ 32ನೇ ಮುಖಾಮುಖಿಯಾಗಿದೆ. ಇದಕ್ಕೂ ಮುನ್ನ ಆಡಿದ 31 ಪಂದ್ಯಗಳಲ್ಲಿ ಭಾರತ 19 ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ 11 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಆದ್ರೆ ವೆಸ್ಟ್ ಇಂಡೀಸ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಆಡಿದ ಏಕೈಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು.

ಒಟ್ನಲ್ಲಿ ಟಿ-20 ವಿಶ್ವಕಪ್​ ಆರಂಭವಾದ ವರ್ಷವೇ ಟ್ರೋಫಿಗೆ ಮುತ್ತಿಕ್ಕಿದ್ದ ಟೀಂ ಇಂಡಿಯಾಗೆ ಬಳಿಕ ಚಾಂಪಿಯನ್ ಪಟ್ಟಕ್ಕೇರೋದು ಮರೀಚಿಕೆಯಾಗೇ ಉಳಿದಿದೆ. ಈ ಬಾರಿ ಉತ್ತಮ ಪ್ರದರ್ಶನ ನೀಡ್ತಿರೋ ಭಾರತ ತಂಡ ಕಪ್ ಗೆಲ್ಲೋ ಹಾಟ್ ಫೇವರೆಟ್ ಟೀಂ ಎನಿಸಿಕೊಂಡಿದೆ. ಆದ್ರೆ ಸೂಪರ್ 8 ಸುತ್ತಿನಲ್ಲಿ ಹೇಗೆ ಪ್ರದರ್ಶನ ನೀಡ್ತಾರೆ ಅನ್ನೋದೇ ಈಗಿರುವ ಪ್ರಶ್ನೆ.

Shwetha M

Leave a Reply

Your email address will not be published. Required fields are marked *