ಕೋರಮಂಗಲದ ಅಗ್ನಿ ದುರಂತ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ – ನಿಯಮ ಉಲ್ಲಂಘಿಸಿದ 48 ರೆಸ್ಟೋರೆಂಟ್’ಗಳು ಬಂದ್!

ಕೋರಮಂಗಲದ ಅಗ್ನಿ ದುರಂತ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ – ನಿಯಮ ಉಲ್ಲಂಘಿಸಿದ 48 ರೆಸ್ಟೋರೆಂಟ್’ಗಳು ಬಂದ್!

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಪದೇ ಪದೆ ಅಗ್ನಿ ಅವಘಡಗಳು ಸಂಭವಿಸುತ್ತಲೇ ಇದೆ. ಕಳೆದ ಕೆಲವು ದಿನಗಳ ಹಿಂದೆ ಕೋರಮಂಗಲದ ಹುಕ್ಕಾ ಬಾರ್ ಮಡ್​​ಪೈಪ್ ಕೆಫೆಯಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಈ ಘಟನೆ ಬಳಿಕ ಎಚ್ಚೆತ್ತುಕೊಂಡ ಬಿಬಿಎಂ ಅಧಿಕಾರಿಗಳು ನಗರದ ಪಬ್​, ಬಾರ್​​ ಮತ್ತು ರೆಸ್ಟೋರೆಂಟ್​ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ನಿಯಮ ಉಲ್ಲಂಘಿಸಿದ48 ಹೋಟೆಲ್, ರೆಸ್ಟೋರೆಂಟ್ ಗಳನ್ನು ಬಂದ್ ಮಾಡಿಸಿದ್ದಾರೆ.

ಕಳೆದ ಶುಕ್ರವಾರದಿಂದ ಬಿಬಿಎಂಪಿ ಅಧಿಕಾರಿಗಳು ನಗರ ಹೋಟೆಲ್, ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದುವರೆಗೆ 600 ಕ್ಕೂ ಹೆಚ್ಚು ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪರಿಶೀಲನೆ ನಡೆಸಿದ್ದು, ಪರವಾನಗಿ ನಿಯಮಗಳನ್ನು ಅನುಸರಿಸದಿರುವುದು ಮತ್ತು ಇತರ ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಇದುವರೆಗೆ 48 ಹೋಟೆಲ್, ರೆಸ್ಟೋರೆಂಟ್ ಗಳನ್ನು ಬಂದ್ ಮಾಡಿಸಿದ್ದಾರೆ.

ಇದನ್ನೂ ಓದಿ: ಗಾಜಾ ಪಟ್ಟಿ ಮೇಲೆ ಮತ್ತೆ ದಾಳಿ ನಡೆಸಿದ ಇಸ್ರೇಲ್ – 24 ಗಂಟೆಗಳಲ್ಲಿ 700 ಮಂದಿ ಸಾವು

ಇನ್ನು ಪರವಾನಗಿ ಹಾಗೂ ನಿಯಮಗಳನ್ನು ಪಾಲಿಸದಿರುವ ಹೋಟೆಲ್‌, ರೆಸ್ಟೋರೆಂಟ್‌, ಬಾರ್‌ಗಳ ಪಟ್ಟಿಯಲ್ಲಿ ಮಹದೇವಪುರ ಹಾಗೂ ಪೂರ್ವ ವಲಯ ಅಗ್ರಸ್ಥಾನದಲ್ಲಿದೆ. ನಿಯಮ ಉಲ್ಲಂಘಿಸಿರುವ 353 ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ನೋಟಿಸ್ ನಲ್ಲಿ ಆದಷ್ಟು ಬೇಗ ಕಾನೂನು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದ್ದು, ದಾಖಲೆ ಸಲ್ಲಿಸದಿದ್ದರೆ, ಹೋಟೆಲ್ ಗಳನ್ನು ಬಂದ್ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೂರ್ವ ವಲಯದಲ್ಲಿ ಅತಿ ಹೆಚ್ಚು ಉಲ್ಲಂಘನೆಗಳು ಕಂಡು ಬಂದಿದ್ದು 107 ಮಾಲೀಕರಿಗೆ ನೋಟಿಸ್‌ಗಳನ್ನು ನೀಡಲಾಗಿದೆ. 13 ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳನ್ನು ಬಂದ್ ಮಾಡಲಾಗಿದೆ. ಇನ್ನು ದಕ್ಷಿಣ ವಲಯದಲ್ಲಿ 59 ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, 8 ಅಂಗಡಿಗಳನ್ನು ಮುಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

Shwetha M