ಮೊಬೈಲ್ ಚಾರ್ಜರ್ ಬಾಯಿಗೆ ಇಟ್ಟುಕೊಂಡ 8 ತಿಂಗಳ ಕೂಸು – ಕರೆಂಟ್ ಶಾಕ್ ನಿಂದ ಕಂದಮ್ಮ ಸಾವು
ಮನೆಯಲ್ಲಿ ಮಕ್ಕಳು ಇದ್ದರೆ ಮೈ ಎಲ್ಲಾ ಕಣ್ಣಾಗಿರಬೇಕು ಅಂತಾ ದೊಡ್ಡವರು ಹೇಳುತ್ತಾರೆ. ಯಾಕೆಂದರೆ ಮಕ್ಕಳಿಗೆ ಏನೂ ಅರಿವಿರುವುದಿಲ್ಲ. ಹೀಗಾಗಿ ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕಿಕೊಳ್ಳುತ್ತಾರೆ. ಹಾಗೂ ಕೈಗೆ ಸಿಕ್ಕ ವಸ್ತುಗಳನ್ನ ಹಿಡಿದು ಆಟವಾಡುತ್ತಾರೆ. ಒಂಚೂರು ಯಾಮಾರಿದರೂ ನಡೆಯಬಾರದ ದುರಂತ ನಡೆದು ಹೋಗುತ್ತದೆ. ಇದೀಗ ಕಾರವಾರದಲ್ಲೇ ಇಂಥದ್ದೇ ದುರಂತ ನಡೆದಿದೆ.
ಇದನ್ನೂ ಓದಿ : ಕಲುಷಿತ ನೀರು ಸೇವಿಸಿ ಇಬ್ಬರು ಸಾವು ಪ್ರಕರಣಕ್ಕೆ ಟ್ವಿಸ್ಟ್ – ಪೋಕ್ಸೋ ಕೇಸ್ ಹಾಕಿದ್ದಕ್ಕೆ ಟ್ಯಾಂಕ್ ಗೆ ವಿಷ ಬೆರೆಸಿದ್ರಾ?
ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ಮೊಬೈಲ್ ಚಾರ್ಜರ್ ವೈರ್ ನಿಂದ ವಿದ್ಯುತ್ ಪ್ರವಹಿಸಿ ಮಗು ಸಾವನ್ನಪ್ಪಿದೆ. ಸಂತೋಷ್ ಹಾಗೂ ಸಂಜನಾ ದಂಪತಿಯ 8 ತಿಂಗಳ ಹೆಣ್ಣು ಮಗು ಸಾನಿಧ್ಯ ಹಸುನೀಗಿದೆ. ಮೊಬೈಲ್ ಫೋನ್ ಚಾರ್ಜ್ ಗೆ ಹಾಕಿ ಪೋಷಕರು ಫೋನ್ ತೆಗೆದುಕೊಂಡಿದ್ದರು. ಆದರೆ ಚಾರ್ಜ್ ಗೆ ಹಾಕಿದ್ದ ವೈರ್ ಹಾಗೇ ಇತ್ತು. ಹಾಗೂ ಸ್ವಿಚ್ ಕೂಡ ಆಫ್ ಮಾಡಿರಲಿಲ್ಲ. ಈ ವೇಳೆ ಚಾರ್ಜರ್ ಮಗು ಕೈಗೆ ಸಿಕ್ಕಿದ್ದು ಮಗು ಚಾರ್ಜರ್ ಅನ್ನು ಬಾಯಿಗೆ ಹಾಕಿಕೊಂಡಿದೆ. ಪರಿಣಾಮ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದೆ.
ಇನ್ನು ಕೆಲಸದಲ್ಲಿ ಮಗ್ನರಾಗಿದ್ದ ಪೋಷಕರು ಮಗುವಿನ ಚೀರಾಟ ಕೇಳಿ ಓಡೋಡಿ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಆಗಲೇ ಮಗು ಕೊನೆಯುಸಿರೆಳೆದಿತ್ತು. ಪುಟ್ಟ ಕಂದನನ್ನ ಕಳೆದುಕೊಂಡಿರುವ ಮನೆಯಲ್ಲಿ ಈಗ ಸೂತಕ ಆವರಿಸಿದೆ. ಮುದ್ದು ಮುದ್ದಾದ ಕಂದನನ್ನ ಕಳೆದುಕೊಂಡು ಪೋಷಕರು ಕಣ್ಣೀರಿಡುತ್ತಿದ್ದಾರೆ. ಹೀಗಾಗಿ ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದರೆ ಪೋಷಕರು ಇನ್ನಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ.